ಬಾಕಿ ಒಂಬತ್ತು ಭರವಸೆಗಳನ್ನು ಕಾಂಗ್ರೆಸ್ ಸರಕಾರ ಕೂಡಲೇ ಈಡೇರಿಸಲಿ ; ಕಲಬುರಗಿಯ ಮುಸ್ಲಿಮ್ ಸಮಾವೇಶದಲ್ಲಿ ಹಕ್ಕೊತ್ತಾಯ
'ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು ? ವರದಿ ಹಾಗೂ ಆಗ್ರಹಗಳ ಪರಿಚಯ
ಕಲಬುರಗಿ: ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳಲ್ಲಿ ಕೇವಲ ಒಂದನ್ನು ಮಾತ್ರ ಈವರೆಗೆ ಈಡೇರಿಸಿದ್ದು, ಇನ್ನುಳಿದ ಒಂಬತ್ತು ಆಗ್ರಹಗಳನ್ನು ಕೂಡಲೇ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ವಕ್ತಾರ ಸುಹೈಲ್ ಅಹ್ಮದ್ ಮೈಸೂರು ಒತ್ತಾಯಿಸಿದ್ದಾರೆ.
ನಗರದ ಹಾಗರಗಾ ಕ್ರಾಸ್ ಸಮೀಪದ ಸಭಾ ಫಂಕ್ಷನ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ರವಿವಾರ 'ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು ? ವರದಿ ಹಾಗೂ ಆಗ್ರಹಗಳ ಪರಿಚಯ' ಎಂಬ ಶೀರ್ಷಿಕೆಯಡಿ ನಡೆದ ಕರ್ನಾಟಕ ಮುಸ್ಲಿಂ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೇ.16ರಂದು ಬೆಂಗಳೂರಿನಲ್ಲಿ ಮುಸ್ಲಿಂ ಸಮಾವೇಶ ಆಯೋಜಿಸಿದಾಗ ಕಾಂಗ್ರೆಸ್ ಸರಕಾರ ಹಿಜಾಬ್ ನಿರ್ಬಂಧವನ್ನು ಹಿಂಪಡೆದಿದೆ. ಆದರೆ ಇನ್ನುಳಿದ ಪ್ರಮುಖ ಭರವಸೆಗಳಾದ ಮುಸ್ಲಿಂ ಮೀಸಲಾತಿ ಪುನಃಸ್ಥಾಪನೆ, ದ್ವೇಷ ಭಾಷಣಗಳಿಗೆ ಕಡಿವಾಣ, ಹತ್ತು ಸಾವಿರ ಕೋಟಿ ಬಜೆಟ್ ಹಂಚಿಕೆ, ಸೂಕ್ತ ರಾಜಕೀಯ ಪ್ರಾತಿನಿಧ್ಯ, ವಕ್ಫ್ ಭೂಮಿ ರಕ್ಷಣೆ ಹಾಗು ಅಭಿವೃದ್ಧಿ, ಗೋಹತ್ಯೆ ನಿಷೇಧ ಕಾಯ್ದೆ ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಪೂರೈಸಿಲ್ಲ. ಈ ಕೂಡಲೇ ಬಾಕಿ ಬೇಡಿಕೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.
ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಚಳವಳಿ ರೂಪಿಸಬೇಕು, ಸರ್ಕಾರಗಳು ಸಾಧನಾ ಸಮಾವೇಶಗಳಲ್ಲಿ ತಮ್ಮನ್ನು ತಾವೇ ಭೇಷ್ ಹೇಳಿಕೊಳ್ಳುತ್ತವೆ. ಆದರೆ ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದ ಅವರು, ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ, ಸಂಘಟನೆ ಹೋರಾಟದಿಂದ ಮಾತ್ರ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಸಮಾವೇಶ ಮಾಡಬಾರದೆಂದು ಸರಕಾರ ಒಂದು ದಿನ ಮೊದಲು ಹೇಳಿತು. ಆದರೆ ಅವರ ಸಮುದಾಯದ ಭವಿಷ್ಯದ ಹಿತಕ್ಕಾಗಿ ಸಮಾವೇಶ ಯಶಸ್ವಿಯಾಗಿ ಮಾಡಿದ್ದೇವೆ. ಒಂದು ವೇಳೆ ನಮ್ಮ ಹಕ್ಕುಗಳನ್ನು ಪೂರೈಸುವಲ್ಲಿ ಕಾಂಗ್ರೆಸ್ ಹಿಂದೆ ಸರಿದರೆ ಅದಕ್ಕೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಸುಹೈಲ್ ಅಹ್ಮದ್ ಮೈಸೂರು ಹೇಳಿದರು.
ಸಮುದಾಯಕ್ಕೆ 1 ಸಚಿವ ಸ್ಥಾನ ಕೊಟ್ಟಿದ್ದೀರಿ. ಕಾಂಗ್ರೆಸ್ ಅಸಹಾಯಕ ಸ್ಥಿತಿಯಲ್ಲಿದೆ ಎನ್ನುವುದು ಕಾಣುತ್ತಿದೆ. ದೇಶದ ಮೂಲ ನಿವಾಸಿಗಳು ನಾವು, ಸ್ವಾತಂತ್ರ್ಯ ಹೋರಾಟಕ್ಕಾಗಿ ಗುಂಡೇಟು, ಲಾಠಿ ಏಟು ತಿಂದು ಸಾವಿರಾರು ಜೀವ ತ್ಯಜಿಸಿದ್ದೇವೆ. ಆದರೂ ಮುಸ್ಲಿಂ ಸಮುದಾಯಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ ಕೊಡುತ್ತಿಲ್ಲ. ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯತ್ವದ ಪ್ರವೇಶಕ್ಕೂ ಅವಕಾಶ ನೀಡಿಲ್ಲ ಎಂದ ಅವರು, ಇಷ್ಟು ದೊಡ್ಡ ಪ್ರಮಾಣದಲ್ಲಿ ಮತದಾನದ ಕೊಡುಗೆ ನೀಡಿದ ಮುಸ್ಲಿಂ ಸಮುದಾಯದ ಋಣ ತೀರಿಸಬೇಕೆಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಹೇಳಿದ್ದೇನು ? ಮಾಡಿದ್ದೇನು ? ಮುಂದೇನು ? ಎಂಬ ಕಾಂಗ್ರೆಸ್ ಭರವಸೆಗಳ ಕುರಿತ ವರದಿ ಹಾಗು ಆಗ್ರಹಗಳ ವಿವರಗಳಿರುವ ಪುಸ್ತಕವನ್ನು ಜನರಿಗೆ ಪರಿಚಯಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ತಹಸೀಲ್ದಾರ್ ನಿಸಾರ್ ಅಹ್ಮದ್ ವಝೀರ್ ಅವರು ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಗಳನ್ನು ಈವರೆಗೂ ಈಡೇರಿಸಿಲ್ಲ. ಹಾಗಾಗಿ ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ರಚಿಸಿ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟಕ್ಕೆ ಇಳಿದಿದ್ದೇವೆ. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾವಾರು ಮತದಾನ ನಷ್ಟವಾಗಲಿದೆ ಎಂದು ಎಚ್ಚರಿಸಿದರು.
ಮುಸ್ಲಿಂ ಒಕ್ಕೂಟ ನಾನ್ ಪಾಲಿಟಿಕಲ್ ಸಂಸ್ಥೆ, ನಿಷ್ಪಕ್ಷವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಇಲ್ಲಿ ಸೇರ್ಪಡೆಗೊಳ್ಳಲಾಗುತ್ತದೆ. ನ್ಯಾಯ ಸಿಗುತ್ತಿಲ್ಲ ಎನ್ನುವುದಾದರೆ ಅಂತಹ ಸ್ಥಳದಲ್ಲಿ ತೆರಳಿ ನ್ಯಾಯ ಕೊಡಿಸುವ ಕೆಲಸ ಮಾಡಲಿದೆ. ಒಂದು ವೇಳೆ ಅಲ್ಲಿನ ಶಾಸಕರು ಸ್ಪಂದಿಸದೇ ಇದ್ದರೆ ಮುಂದೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಹೈದ್ರಾಬಾದ ಕರ್ನಾಟಕ ಮುಸ್ಲಿಂ ಸಂಘಟನಾ ಕಾರ್ಯದರ್ಶಿ ರಾಜಾ ಪಟೇಲ್ ನದಿಸಿನ್ನೂರ ಮಾತನಾಡಿ, ಮುಸ್ಲಿಮರ ಮತಗಳನ್ನು ಬಳಸಿಕೊಂಡಿರುವ ಕಾಂಗ್ರೆಸ್ ಸರಕಾರ ಇದೀಗ ದೊಡ್ಡ ಅನ್ಯಾಯ ಮಾಡುತ್ತಿದೆ, ಇದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷಗಳನ್ನೇ ಮುಗಿಸಿದೆ. ಒಂದೂ ಬೇಡಿಕೆಗಳು ಈಡೇರಿಸಿಲ್ಲ, ತನಗೆ ಬೇಕಾದಂತೆ ಉಪಯೋಗಿಸಿ ಬಿಸಾಡುತ್ತಿದೆ. ಒಂದು ವೇಳೆ 2028 ಒಳಗಾಗಿ ನಮ್ಮ ಬೇಡಿಕೆಗಳನ್ನು ಪೂರೈಸಿದೆ ಇದ್ದರೆ ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಹಾರೀಸ್ ಸಿದ್ದಿಕಿ ಮಾತನಾಡಿ, ಮೀಸಲಾತಿ ಅಡಿಯಲ್ಲಿ ಪ್ರತಿವರ್ಷ 1700 ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟು ಪಡೆಯುತ್ತಾರೆ, ಮೀಸಲಾತಿ ಜಾರಿಗೆ ತರದೇ ಇದು ನಷ್ಟವಾಗುತ್ತಿದೆ. 2ಬಿ ಪುನರ್ ಸ್ಥಾಪನೆ ಮಾಡುತ್ತೇವೆ, 10 ಸಾವಿರ ಕೋಟಿ ಬಜೆಟ್ ನೀಡುವುದಾಗಿ ಹೇಳುತ್ತಾರೆ, ಆದರೆ ಅದ್ಯಾವುದೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
3 ವರ್ಷದಲ್ಲಿ ರಾಜ್ಯದಲ್ಲಿ 217 ದ್ವೇಷ ಭಾಷಣಗಳಾಗಿವೆ. 19 ವ್ಯಕ್ತಿಗಳು ಶಾಂತಿಯ ತೋಟದಲ್ಲಿ ಅಶಾಂತಿ ಸೃಷ್ಟಿಸಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಏಕೆ? ಇಷ್ಟು ವರ್ಷಗಳ ಕಾದಿದ್ದೇವೆ. ಆದರೆ ಇನ್ಮುಂದೆ ಕಾಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
1988 - 2008 ಅವಧಿಯಲ್ಲಿ ಖಮರುಲ್ ಇಸ್ಲಾಂ, ಅಬ್ದುಲ್ ಸಮದ್ ಸಿದ್ದಿಕಿ, ರೆಹಮಾನ್ ಖಾನ್, ಸಿಎಂ ಇಬ್ರಾಹಿಂ, ಜಾಫರ್ ಶರೀಫ್ ಹೀಗೆ ಅನೇಕ ಮುಸ್ಲಿಮ್ ಸಂಸದರಿದ್ದರು. ಇಂದು ಮುಸ್ಲಿಮರಿಂದ ಲೋಕಸಭಾ ಸಂಸದರೇ ಇಲ್ಲ . ಈ ಬಗ್ಗೆ ಯೋಚಿಸುವ ಅಗತ್ಯವಿದೆ. 3 ವರ್ಷಗಳಲ್ಲಿ 24 ಎಂಎಲ್ಸಿಗಳಲ್ಲಿ ಒಬ್ಬರೇ ಮುಸ್ಲಿಂರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಖ್ ಸಮುದಾಯದ ಮುಖಂಡ ಗುರುಮಿತಸಿಂಗ್ ಸಹುಜಾ ಮಾತನಾಡಿ, ಭಾರತದಲ್ಲಿ ದ್ವೇಷದ ಬೆಂಕಿ ಹರಿದಾಡುತ್ತಿದೆ. ರಾಜಕೀಯ ಪಕ್ಷಗಳು ಜನರನ್ನು ವಿಭಜಿಸುತ್ತಿವೆ. ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದರೆ ನಿಜಕ್ಕೂ ದುಃಖಕರ. ಮುಸ್ಲಿಂ ಸಮುದಾಯ ಒಗ್ಗಟ್ಟು ತಮ್ಮ ಹಕ್ಕುಗಳು ಪಡೆಯಬೇಕು ಎಂದು ಸಲಹೆ ಕೊಟ್ಟರು.
ಹೋರಾಟಗಾರ ಇಬ್ರಾಹಿಂ ಪಟೇಲ್ ಯಾಳವಾರ ಮಾತನಾಡಿ, ಮುಸ್ಲಿಮ್ ಸಮುದಾಯದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವುದಕ್ಕಾಗಿ ಎಲ್ಲರೂ ಒಗ್ಗಟ್ಟಾಗಬೇಕಿದೆ. 88 ಪರ್ಸೆಂಟ್ ಮತದಾನ ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟಿದ್ದೇವೆ. ಚುನಾವಣೆ ಮುಗಿದು 3 ವರ್ಷ ಕಳೆದರೂ ನಮ್ಮ ಆಗ್ರಹಗಳನ್ನು ಈಡೇರಿಸಿಲ್ಲ. ಎಲ್ಲಿಯವರೆಗೂ ಧ್ವನಿ ಎತ್ತುವುದಿಲ್ಲ, ಅಲ್ಲಿಯವರೆಗೆ ಸಮಸ್ಯೆ ಪರಿಹಾರವಾಗುವುದಿಲ್ಲ. ಜಾಗೃತವಾಗಿ ಹೋರಾಡಬೇಕು ಎಂದರು.
ಸಂಘಟಕ ಅಫ್ಜಲ್ ಮಹೆಮೂದ್ ಮಾತನಾಡಿ, ದಾವಣಗೆರೆಯಲ್ಲಿ ಅತಿಹೆಚ್ಚು ಮತಗಳ ಬಾಹುಳ್ಯವಿದ್ದರೂ ಕಾಂಗ್ರೆಸ್ ಮುಸ್ಲಿಮರಿಗೆ ಟಿಕೆಟ್ ನೀಡಲಿಲ್ಲ. ಸಂಪುಟದಲ್ಲಿ ಕನಿಷ್ಠ 5 ಮಂದಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಅದನ್ನು ಮಾಡಿಲ್ಲ. 4 % ಮೀಸಲಾತಿ ಪುನಃಸ್ಥಾಪನೆಯ ಭರವಸೆ ನೀಡಿತ್ತು. ಆದರೆ ಬೇಡಿಕೆ ಈಡೇರಿಕೆ ಮಾಡಿಲ್ಲ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಫಿರೋಜ್ ಖಾನ್, ಅಜೀಜ್ ಅಹ್ಮದ್ ಶಾನ್, ಸಲಾಂ ಪಾಶಾ ಮನ್ನಾಖೇಳಿ, ಮುಹಮ್ಮದ್ ಮುಷ್ತಾಕ್, ಸೊಹೈಲ್ ಬಸ್ತಿ ಬಾಗಲಕೋಟ, ಮುಹಮ್ಮದ್ ರಫೀಕ್, ಇಸ್ಮಾಯಿಲ್ ಹುಸೇನ್ ಉಡುಪಿ, ಮೊಹಮ್ಮದ್ ರಫೀಕ್ ಉಡುಪಿ, ಸಯ್ಯದ್ ಫರೀದ್ ಉಡುಪಿ, ಪುರಖಾನ್, ಮುಹಮ್ಮದ್ ಮುಜಾಹಿದ್ ಹುಸೈನ್, ಇಕ್ಬಾಲ್ ಅಲಿ, ಮತ್ತಿತ್ತರರು ವೇದಿಕೆಯಲ್ಲಿದ್ದರು.