Kalaburagi | ಭಾಷೆಗೆ ಧರ್ಮದ ಲೇಪನವಿಲ್ಲ, ಭಾಷೆಯ ಆಧಾರದಲ್ಲಿ ದೇಶಪ್ರೇಮ ಅಳೆಯುವುದು ತಪ್ಪು: ಪ್ರೊ.ಮೀನಾಕ್ಷಿ ಬಾಳಿ
ಕಲಬುರಗಿ: ಭಾರತವು ಬಹುತ್ವ ಭಾಷೆಗಳ ತವರುಮನೆಯಾಗಿದ್ದು, ಕನ್ನಡ, ಉರ್ದು, ಸಂಸ್ಕೃತ, ತೆಲುಗು, ಮರಾಠಿ, ಗುಜರಾತಿ ಸೇರಿದಂತೆ ಎಲ್ಲ ಭಾಷೆಗಳೂ ಭಾರತೀಯ ಭಾಷೆಗಳೇ ಆಗಿವೆ. ಯಾವುದೇ ಭಾಷೆಗೆ ಧರ್ಮದ ಲೇಪನವಿಲ್ಲ. ಹಾಗೆಯೇ ಭಾಷೆಯ ಆಧಾರದ ಮೇಲೆ ಯಾವುದೇ ನಾಗರಿಕನ ದೇಶಪ್ರೇಮವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ವರ್ತಮಾನದ ರಾಜಕಾರಣ ಈ ವಿಭಜನೆಯ ಪ್ರಯತ್ನ ಮಾಡುತ್ತಿದೆ ಎಂದು ಚಿಂತಕಿ ಪ್ರೊ.ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಕಲಬುರಗಿ ನಗರದ ಹಮೀದ ಪಿಯಾರೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಸೂಫಿತ್ವದ ಸ್ಪರ್ಶದಲ್ಲಿ ಕನ್ನಡ ತತ್ವಪದಕಾರರು’ ವಿಷಯದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಈವರೆಗೆ ಲಿಂಗ, ಜಾತಿ, ಧರ್ಮ ಮತ್ತು ಪಂಥಗಳ ಆಧಾರದ ಮೇಲೆ ವಿಭಜಿತವಾಗಿದ್ದ ಸಮಾಜ ಈಗ ಭಾಷೆಗಳ ಆಧಾರದ ಮೇಲೂ ಒಡೆಯುವ ಅಪಾಯ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಂವಾದವನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಸೂಫಿಗಳು ಭಾಷಿಕ ರಾಜಕಾರಣವನ್ನು ಸಾರಾಸಗಟಾಗಿ ತಿರಸ್ಕರಿಸಿದವರಾಗಿದ್ದರು. ವಿದ್ಯಾರ್ಥಿಗಳು ರಾಜಕೀಯ ಒತ್ತಡಗಳಿಗೆ ಒಳಗಾಗದೆ ಜ್ಞಾನಾರ್ಜನೆಗಾಗಿ ಬಹುಭಾಷೆಗಳನ್ನು ಕಲಿಯಬೇಕು. ಬಹುಭಾಷಾ ಜ್ಞಾನವು ವ್ಯಕ್ತಿಯ ಬದುಕನ್ನು ಹೆಚ್ಚು ಸಹ್ಯ, ಸಮೃದ್ಧ ಮತ್ತು ಸಹಿಷ್ಣುವಾಗಿಸುತ್ತದೆ ಎಂದು ಅವರು ತಿಳಿಸಿದರು.
ಕನ್ನಡ ತತ್ವಪದಕಾರರನ್ನು ಅರ್ಥೈಸಿಕೊಳ್ಳುವ ಸಂದರ್ಭದಲ್ಲಿ ಸೂಫಿತ್ವದ ಸ್ಪರ್ಶದ ವಿಶಾಲಾರ್ಥವನ್ನು ಗ್ರಹಿಸಬೇಕಾಗಿದೆ. ಶರಣರು, ತತ್ವಪದಕಾರರು ಮತ್ತು ಸೂಫಿಗಳು ಸಂಪ್ರದಾಯಬದ್ಧ ಧಾರ್ಮಿಕ ಕಲ್ಪನೆಗಳನ್ನು ಪ್ರಶ್ನಿಸಿ, ಮಾನವೀಯ ಮೌಲ್ಯಗಳು ಮತ್ತು ಆಧ್ಯಾತ್ಮಿಕ ಅನುಭವಗಳಿಗೆ ಹೆಚ್ಚಿನ ಮಹತ್ವ ನೀಡಿದರು ಎಂದು ಅವರು ಅಭಿಪ್ರಾಯಪಟ್ಟರು.
ಶರಣರು ಮತ್ತು ತತ್ವಪದಕಾರರು ‘ಬಯಲು’ ಎಂಬ ತಾತ್ವಿಕ ಪರಿಕಲ್ಪನೆಯನ್ನು ಪ್ರತಿಪಾದಿಸಿದರೆ, ಸೂಫಿಗಳು ಅದಕ್ಕೆ ಸಮಾನಾಂತರವಾಗಿ ‘ಫನಾ’ ಎಂಬ ಆಧ್ಯಾತ್ಮಿಕ ಪರಿಕಲ್ಪನೆಯನ್ನು ರೂಪಿಸಿದರು. ಸೂಫಿಯಾನ ಪಂಥವು ಇಸ್ಲಾಂ ಧರ್ಮದ ಉದಯಕ್ಕೂ ಪೂರ್ವದಲ್ಲೇ ಅಸ್ತಿತ್ವದಲ್ಲಿದ್ದ ಆನುಭಾವಿಕ ಪರಂಪರೆಯಾಗಿದ್ದು, ಅದು ಹುಟ್ಟಿಕೊಂಡ ಭೌಗೋಳಿಕ ಹಿನ್ನೆಲೆಯ ಕಾರಣದಿಂದ ಇಸ್ಲಾಂ ಧರ್ಮದೊಂದಿಗೆ ಜೋಡಿಸಿ ನೋಡಲಾಗುತ್ತಿದೆ. ವಾಸ್ತವವಾಗಿ ಸೂಫಿಯಾನ ತತ್ವ ಮತ್ತು ಧರ್ಮದ ನಡುವಿನ ಸಂಬಂಧವನ್ನು ವಿಶಾಲ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗನಗೌಡ ಹಿರೇಗೌಡ, ಕಾಲಾತೀತವಾಗಿ ಮತ್ತು ಧರ್ಮಾತೀತವಾಗಿ ಬದುಕಿದ ಸೂಫಿ ತತ್ವಪದಕಾರರು ಹಾಗೂ ಅವಧೂತರು ‘ಕೂಡಿ ಬದುಕುವುದೇ ಧರ್ಮ’ ಎಂಬ ಹೊಸ ಅರ್ಥವನ್ನು ಸಮಾಜಕ್ಕೆ ನೀಡಿದರು. ಎಲ್ಲ ಸೌಲಭ್ಯಗಳ ನಡುವೆ ಇದ್ದರೂ ಅವುಗಳಿಂದ ಅಂತರ ಕಾಯ್ದುಕೊಂಡು ಬದುಕುವ ಆನುಭಾವಿಕ ಸಾಧನೆ ಅವರ ವೈಶಿಷ್ಟ್ಯವಾಗಿತ್ತು ಎಂದು ಹೇಳಿದರು.
ಡಾ. ರಬಿಯಾ ಖಾನಮ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ವನಿತಾ ಜಾಧವ ಅಧ್ಯಕ್ಷತೆ ವಹಿಸಿದ್ದರು. ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶರಣಬಸಪ್ಪ ವಡ್ಡನಕೇರಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಡಾ. ಅರುಣ ಜೋಳದಕೂಡ್ಲಗಿ, ಪ್ರೊ. ಎಸ್.ಎನ್. ಪಾಟೀಲ, ಡಿ.ಎಂ. ನದಾಫ್, ಆಯಿಷಾ ಪಟೇಲ್, ನಾಗಮ್ಮ ಹಿರಾಣಿ, ಶ್ರೀಕಾಂತ ತಾವರಗೇರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.