×
Ad

Kalaburagi | ಕನ್ನಡ ನಾಡಿಗೆ ಲಲಿತ ಕಲೆಗಳ ಕೊಡುಗೆ ಅನನ್ಯ : ಬಸವರಾಜ ದೇಶಮುಖ

ಲಲಿತ ಕಲೆಗಳ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Update: 2026-06-16 18:07 IST

ಕಲಬುರಗಿ: ಕನ್ನಡ ನಾಡಿನ ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯವನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ ವಿವಿಧ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಅಗತ್ಯ ಸಹಕಾರ ನೀಡುತ್ತಿದ್ದು, ಶಿವಶರಣರ ವಚನಗಳು ಮತ್ತು ತತ್ವಪದಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಭಿಪ್ರಾಯಪಟ್ಟರು.

ನಗರದಲ್ಲಿ ಸೋಮವಾರ ಗಡಿನಾಡ ಸಂಗೀತ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಲಲಿತ ಕಲೆಗಳ ಸಂಗಮ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆ ಮಹಾಮಂಡಳಿಯ ನಿರ್ದೇಶಕ ಧರ್ಮರಾಜ ಸಾಹು ಭೂಸನೂರ ಮಾತನಾಡಿ, ಶಿಲ್ಪಕಲೆ, ಚಿತ್ರಕಲೆ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ಲಲಿತ ಕಲೆಗಳು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿಹಿಡಿಯುವ ಪ್ರಮುಖ ಮಾಧ್ಯಮಗಳಾಗಿವೆ ಎಂದರು.

ಮಾನವನ ಜೀವನದಲ್ಲಿ ಮಾತ್ರವಲ್ಲದೆ ಸಮಸ್ತ ಜೀವಿಗಳ ಬದುಕಿನಲ್ಲಿಯೂ ಕಲೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕಲೆಗಳು ವ್ಯಕ್ತಿತ್ವ ವಿಕಸನ, ಸಂಸ್ಕೃತಿ ಸಂರಕ್ಷಣೆ ಹಾಗೂ ಸಮಾಜದಲ್ಲಿ ಸೌಹಾರ್ದತೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.

ಮಂಗಲಗಿಯ ಶ್ರೀ ಶಾಂತೇಶ್ವರ ಹಿರೇಮಠದ ಡಾ.ಶಾಂತ ಸೋಮನಾಥ ಶಿವಾಚಾರ್ಯ ದಿವ್ಯ ಸಾನಿಧ್ಯ ವಹಿಸಿದ್ದರು. ಡಾ.ನೀಲಾಂಬಿಕಾ ಪೋಲಿಸ್ ಪಾಟೀಲ, ಬಸವರಾಜ ಮುನ್ನೊಳ್ಳಿ, ಶಂಭುಲಿಂಗಯ್ಯ ಮಠಪತಿ ತಾವರಗೇರಾ, ಶಿವಯ್ಯ ಸ್ವಾಮಿ ಆಲೂರ ಬಿ.ಮುಖ್ಯ ಅತಿಥಿಗಳಾಗಿದ್ದರು.

ನಂತರ ಹೆಸರಾಂತ ಆಕಾಶವಾಣಿ ದೂರದರ್ಶನ ಕಲಾವಿದರಾದ ಬಸವರಾಜ ಭಂಟನೂರ, ಮಲ್ಲಿಕಾರ್ಜುನ ಶಾಸ್ತ್ರೀ ಐನಾಪೂರ, ಜಗದೀಶ ನಗನೂರ, ಕವಿತಾ ಮಠಪತಿ ಮೊದಲಾದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಇನ್ನೋರ್ವ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಹಾಗೂ ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತ ಸೋಹನಿ ರಾಗದಲ್ಲಿ ಪ್ರಸ್ತುತ ಪಡಿಸಿದ ತ್ರಿಭಾಷಾ ವಚನ ಗಾಯನ ವಿಶೇಷವಾಗಿತ್ತು. ಗುರುಶಾಂತಯ್ಯ ಸ್ಥಾವರಮಠ ಸ್ವಾಗತಿಸಿದರು. ವಿಶ್ವನಾಥ ರಾಜನಾಳ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News