×
Ad

Kalaburagi | ವಿದ್ಯಾರ್ಥಿಗಳಿಗೆ ಉನ್ನತ ಗುರಿ ಇರಲಿ: ರಾಘವೇಂದ್ರ ಎಂ ಭೈರಪ್ಪ

Update: 2026-05-11 21:57 IST

ಕಲಬುರಗಿ: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ಮಾರ್ಟ್ ಕ್ಲಾಸ್‌ ರೂಂ ನಿರ್ಮಾಣದ ಬೇಡಿಕೆಯನ್ನು ಈಡೇರಿಸಲಾಗಿದ್ದು, ವಿದ್ಯಾರ್ಥಿಗಳು ಲಭ್ಯವಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಗುರಿಯತ್ತ ಸಾಗಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಭೈರಪ್ಪ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೋಮವಾರ ವಿಶ್ವ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಮಹಿಳಾ ಸಬಲೀಕರಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪಾತ್ರ” ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಪತ್ರಿಕೋದ್ಯಮ ವಿಭಾಗ ಉಳಿಸಲು ನಾನು ಪ್ರಯತ್ನಿಸುತ್ತೇನೆ. ವಿದ್ಯಾರ್ಥಿಗಳು ಭವಿಷ್ಯದ ನಾಯಕರು. ಓದಿನ ಜೊತೆಗೆ ಬರವಣಿಗೆ ಶೈಲಿಯನ್ನೂ ಬಲಪಡಿಸಿಕೊಳ್ಳಬೇಕು,” ಎಂದು ಅವರು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

“ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಪತ್ರಕರ್ತರು ಪ್ರಾಮಾಣಿಕ ಹಾಗೂ ವಸ್ತುನಿಷ್ಠ ಸುದ್ದಿಗಳಿಗೆ ಆದ್ಯತೆ ನೀಡಬೇಕು,” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ನಮ್ರತಾ ರಾವುತ್ ವಿಶೇಷ ಉಪನ್ಯಾಸ ನೀಡಿದರು. ಸಿಂಡಿಕೇಟ್ ಸದಸ್ಯ ಉದಯಕಾಂತ ಪಾಟೀಲ್ ಕೂಡ ಮಾತನಾಡಿದರು. ಸಂಯೋಜಕ ಡಾ. ಸುರೇಶ ಜಂಗೆ ಅಧ್ಯಕ್ಷತೆ ವಹಿಸಿದ್ದರು. ಸಂಪಾದಕ ವಿಠ್ಠಲ್ ಚಿಕಣಿ ಉಪಸ್ಥಿತರಿದ್ದರು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಅಶೋಕ ಶರಣಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ. ರಾಜಕುಮಾರ ದಣ್ಣೂರು ಸ್ವಾಗತಿಸಿದರು. ಡಾ. ತೀರ್ಥಕುಮಾರ ಬೆಳಕೋಟ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News