Kalaburagi | ಜನಾಭಿಪ್ರಾಯ ಜನಧ್ವನಿಯಾಗಿ ಬೆಳೆಯಲಿ: ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ: ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಜೀವನವಿಡೀ ಹೋರಾಡಿದ ಸಿದ್ದಣ್ಣ ರಾಜವಾಳ ಅವರ ಆದರ್ಶವನ್ನು ಮುಂದುವರಿಸುವ ಜವಾಬ್ದಾರಿ ಅವರ ಪುತ್ರ ರಾಜೇಂದ್ರ ರಾಜವಾಳ ಅವರ ಮೇಲಿದೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದಲ್ಲಿ ಗುರುವಾರ ನಡೆದ ‘ಜನಾಭಿಪ್ರಾಯ’ ಡಿಜಿಟಲ್ ಮಾಧ್ಯಮದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದಣ್ಣ ರಾಜವಾಳ ಅವರು ಪ್ರಾಮಾಣಿಕ ಹೋರಾಟಗಾರರಾಗಿ ಜನರ ವಿಶ್ವಾಸ ಗಳಿಸಿದ್ದು, ಸಾರ್ವಜನಿಕ ಸಮಸ್ಯೆಗಳು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅನ್ಯಾಯಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುವ ಮೂಲಕ ಅನೇಕ ಕುಟುಂಬಗಳಿಗೆ ನ್ಯಾಯ ದೊರಕಿಸಲು ಶ್ರಮಿಸಿದ್ದರು ಎಂದು ಸ್ಮರಿಸಿದರು.
ರಾಜೇಂದ್ರ ರಾಜವಾಳ ಅವರ ನೇತೃತ್ವದಲ್ಲಿ ಆರಂಭವಾಗಿರುವ ‘ಜನಾಭಿಪ್ರಾಯ’ ಡಿಜಿಟಲ್ ಮಾಧ್ಯಮವು ಜನಸಾಮಾನ್ಯರ ಆಶೋತ್ತರಗಳಿಗೆ ಧ್ವನಿಯಾಗಿ, ಅವರ ಸಮಸ್ಯೆಗಳನ್ನು ನಿರ್ಭೀತಿಯಿಂದ ಬೆಳಕಿಗೆ ತಂದು ಆಡಳಿತದ ಗಮನ ಸೆಳೆಯುವ ಜವಾಬ್ದಾರಿಯುತ ಪತ್ರಿಕೋದ್ಯಮ ನಡೆಸಬೇಕು ಎಂದು ಸಲಹೆ ನೀಡಿದರು.
ಸತ್ಯ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಕಾಳಜಿಯನ್ನು ಪತ್ರಿಕೋದ್ಯಮದ ಮೂಲಮಂತ್ರವಾಗಿಸಿಕೊಂಡು ಕಾರ್ಯನಿರ್ವಹಿಸಿದರೆ, ‘ಜನಾಭಿಪ್ರಾಯ’ ಡಿಜಿಟಲ್ ಮಾಧ್ಯಮವು ಕಲ್ಯಾಣ ಕರ್ನಾಟಕ ಭಾಗದ ಜನರ ವಿಶ್ವಾಸ ಗಳಿಸುವ ಪ್ರಮುಖ ಮಾಧ್ಯಮವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜೇಂದ್ರ ರಾಜವಾಳ ಹಾಗೂ ಅವರ ತಂಡಕ್ಕೆ ಶುಭ ಹಾರೈಸಿದ ಅವರು, ಸಿದ್ದಣ್ಣ ರಾಜವಾಳ ಅವರ ಜನಪರ ಸೇವೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯ ಮುಂದುವರಿಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಚಿದಾನಂದ ಮಹಾಸ್ವಾಮಿಗಳು, ಕೋತಲಪ್ಪ ಮುತ್ಯ, ಶೋಭಾ ಬಾಣಿ, ಕಲ್ಯಾಣ್ ರಾವ್ ಮೂಲಗೆ, ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕರು, ಲಚ್ಚಪ್ಪ ಜಮಾದಾರ, ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರು, ಚಂದ್ರಕಾಂತ ತಳವಾರ, ಸಂತೋಷ ತಳವಾರ, ರವಿ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.