Kalaburagi | ಪತ್ನಿ, ಪುತ್ರಿಯ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ
ಕಲಬುರಗಿ: ಪತ್ನಿಯ ಶೀಲದ ಬಗ್ಗೆ ಸಂಶಯಪಟ್ಟು, ಮನೆಯಲ್ಲಿ ಮಲಗಿದ್ದ ಪತ್ನಿ ಹಾಗೂ 11 ವರ್ಷದ ಪುತ್ರಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿ ದಿಗಂಬರನಿಗೆ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸೇಡಂ ಪೀಠ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ.
ಸೇಡಂ ಪೊಲೀಸ್ ಠಾಣೆಯ ಕ್ರೈಂ ನಂ. 161/2021 ಹಾಗೂ ಎಸ್.ಸಿ. ನಂ. 15/2022ರ ಪ್ರಕರಣದಲ್ಲಿ ದಿಗಂಬರನನ್ನು ಭಾರತೀಯ ದಂಡ ಸಂಹಿತೆ ಕಲಂ 498(ಎ) ಹಾಗೂ 302ರಡಿ ತಪ್ಪಿತಸ್ಥನೆಂದು ಘೋಷಿಸಿದ ನ್ಯಾಯಾಧೀಶ ಸಿರಾಜುದ್ದೀನ್ ಎ. ಅವರು ಸೋಮವಾರ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದ ವಿವರದಂತೆ, ದಿಗಂಬರನು ತನ್ನ ಪತ್ನಿ ಜಗದೀಶ್ವರಿ ಅಲಿಯಾಸ್ ಭವಾನಿಯ ಶೀಲದ ಬಗ್ಗೆ ಸಂಶಯಪಟ್ಟು ಪದೇಪದೇ ಆಕೆಯೊಂದಿಗೆ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ಕುಟುಂಬದವರು ಹಲವು ಬಾರಿ ಬುದ್ಧಿವಾದ ಹೇಳಿದ್ದರೂ ಆತನ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
2021ರ ಸೆಪ್ಟೆಂಬರ್ 23ರಂದು ರಾತ್ರಿ ಸುಮಾರು 2.30ರ ವೇಳೆಗೆ ಸೇಡಂನ ಮನೆಯಲ್ಲಿ ಪತ್ನಿ ಜಗದೀಶ್ವರಿ ಹಾಗೂ 11 ವರ್ಷದ ಪುತ್ರಿ ಮಲಗಿದ್ದಾಗ, ದಿಗಂಬರನು ಕಟ್ಟಿಗೆಯಿಂದ ಇಬ್ಬರ ತಲೆಗೆ ಹೊಡೆದು ಕೊಲೆ ಮಾಡಿದ್ದನು.
ಘಟನೆಗೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕ ರಾಜಶೇಖರ ಹಳಗೋದಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕ ಕೆ.ಆರ್. ನಾಗರಾಜ ಮಸ್ಕಿ ಅವರು ಅಭಿಯೋಜನೆ ಪರವಾಗಿ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ, ಸಾಕ್ಷ್ಯಾಧಾರಗಳನ್ನು ಮಂಡಿಸಿ ಸುದೀರ್ಘ ವಾದ ಮಂಡಿಸಿದ್ದರು.
ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ದಿಗಂಬರನನ್ನು ತಪ್ಪಿತಸ್ಥನೆಂದು ಘೋಷಿಸಿ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ. ಪ್ರಕರಣದ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕೋರ್ಟ್ ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ ಅವರು ಕರ್ತವ್ಯ ನಿರ್ವಹಿಸಿದ್ದರು.