ಕಲಬುರಗಿ: ಸಾರ್ವಜನಿಕ ಶಿಕ್ಷಣ ಬಲಪಡಿಸುವುದು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸುವುದು, ಕೋಮು ಸೌಹಾರ್ದತೆ ಕಾಪಾಡುವುದು ಹಾಗೂ 371(ಜೆ) ಕಲಂ ಸಮರ್ಪಕ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) 17ನೇ ಕರ್ನಾಟಕ ರಾಜ್ಯ ಸಮ್ಮೇಳನವು ಮೂರು ದಿನಗಳ ಕಾಲ ನಗರದ ಕೆಪಿಟಿಸಿಎಲ್ ಭವನದಲ್ಲಿ ನಡೆದಿದ್ದು, ರವಿವಾರ ಸಮಾರೋಪಗೊಂಡಿತು.

ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 250 ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 36 ಸದಸ್ಯರ ನೂತನ ರಾಜ್ಯ ಸಮಿತಿಯನ್ನು ರಚಿಸಲಾಯಿತು. ರಾಜ್ಯಾಧ್ಯಕ್ಷರಾಗಿ ಗಣೇಶ ರಾಠೋಡ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ವಿಜಯಕುಮಾರ್ ಟಿ.ಎಸ್. ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಜಾತಾ ಕಲಬುರಗಿ ಮತ್ತು ಚಂದ್ರು ರಾಠೋಡ, ಸಹಕಾರ್ಯದರ್ಶಿಗಳಾಗಿ ಅರ್ಪಿತಾ ಗ್ರೇಸಿ ಮತ್ತು ಶಿವಾರೆಡ್ಡಿ ಆಯ್ಕೆಯಾದರು.

ನೂತನ ರಾಜ್ಯ ಸಮಿತಿಯ ಹೆಸರನ್ನು ಎಸ್‌ಎಫ್‌ಐ ರಾಷ್ಟ್ರೀಯ ಉಪಾಧ್ಯಕ್ಷೆ ಶಿಲ್ಪಾ ಘೋಷಿಸಿ, ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ರಾಷ್ಟ್ರೀಯ ಅಧ್ಯಕ್ಷ ಆದರ್ಶ್ ಎಂ. ಸಾಜಿ, ಕೇಂದ್ರ ಸಮಿತಿ ಸದಸ್ಯರಾದ ದೊಡ್ಡ ಬಸವರಾಜ ಗುಳೇದಾಳ, ಅಂಬ್ಲಿಕಲ್ ಶಿವಪ್ಪ ಸೇರಿದಂತೆ ಹಲವು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

31 ನಿರ್ಣಯಗಳ ಅಂಗೀಕಾರ

ಸಮ್ಮೇಳನದಲ್ಲಿ ಸಮಾನ ಗುಣಮಟ್ಟದ ಶಿಕ್ಷಣ, ನೀಟ್ ರದ್ದು ಮತ್ತು ಎನ್‌ಟಿಎ ವಿಸರ್ಜನೆ, ಪರೀಕ್ಷಾ ಅಕ್ರಮ ತಡೆ, ಡೊನೇಷನ್ ಹಾವಳಿ ನಿಯಂತ್ರಣ, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ, ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ, ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಹಾಗೂ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು 4,500ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲಾಯಿತು.

ಇದಲ್ಲದೆ, ಶಿಕ್ಷಣ ಕ್ಷೇತ್ರಕ್ಕೆ ಕೊಠಾರಿ ಆಯೋಗದ ಶಿಫಾರಸಿನಂತೆ ಅನುದಾನ ಮೀಸಲಿಡುವುದು, ಕೆಕೆಆರ್‌ಡಿಬಿ ಅನುದಾನವನ್ನು ಶಿಕ್ಷಣಕ್ಕೆ ಬಳಸುವುದು, 371(ಜೆ) ಸಮರ್ಪಕ ಜಾರಿ, ಬಾಕಿ ವಿದ್ಯಾರ್ಥಿವೇತನ ಬಿಡುಗಡೆ, ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ತಡೆ, ಕೋಮು ಸೌಹಾರ್ದತೆ ಮತ್ತು ಜಾತಿ ಅಸ್ಪೃಶ್ಯತೆ ನಿರ್ಮೂಲನೆಗೆ ಸಂಬಂಧಿಸಿದ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಕ್ಯಾಂಪಸ್‌ಗಳಲ್ಲಿ ಮಾದಕ ವಸ್ತುಗಳ ಬಳಕೆ ತಡೆ, ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ಖಿನ್ನತೆ ನಿಯಂತ್ರಣ, ನಿರುದ್ಯೋಗಿಗಳಿಗೆ ಭತ್ಯೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ, ಎಸ್‌ಐಆರ್ ಪ್ರಕ್ರಿಯೆ ಕೈಬಿಡುವುದು, ಕೋಚಿಂಗ್ ಸೆಂಟರ್‌ಗಳ ಹಾವಳಿ ನಿಯಂತ್ರಣ, ಬೆಂಗಳೂರು ಮೆಟ್ರೊ ದರ ಇಳಿಕೆ ಹಾಗೂ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡುವಂತೆ ಒತ್ತಾಯಿಸಿ ಸೇರಿದಂತೆ ಒಟ್ಟು 31 ನಿರ್ಣಯಗಳನ್ನು ಅಂಗೀಕರಿಸಲಾಯಿತು.

ನೂತನ ರಾಜ್ಯ ಸಮಿತಿಯು ಈ ನಿರ್ಣಯಗಳನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಸಂಘಟಿತ ಹೋರಾಟ ರೂಪಿಸಲಿದೆ ಎಂದು ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor