Kalaburagi | ಲಂಚ ಸ್ವೀಕಾರ ಪ್ರಕರಣ: ಪೊಲೀಸ್ ಕಾನ್‌ಸ್ಟೇಬಲ್‌ಗೆ ಐದು ವರ್ಷ ಜೈಲು, 60 ಸಾವಿರ ರೂ. ದಂಡ
ಕಲಬುರಗಿ : ಪ್ರಕರಣವೊಂದರಲ್ಲಿ ದೂರುದಾರರಿಗೆ ಹಣ ಪಾವತಿಸಲು ಕಾಲಾವಕಾಶ ಕೊಡಿಸುವುದಾಗಿ ಹೇಳಿ 60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, 30 ಸಾವಿರ ರೂ. ಸ್ವೀಕರಿಸಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೀಮಾನಾಯಕ ಶಿಕ್ಷೆಗೆ ಗುರಿಯಾದ ಪೊಲೀಸ್ ಕಾನ್‌ಸ್ಟೇಬಲ್.
ಪ್ರಕರಣದ ವಿವರದ ಪ್ರಕಾರ, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ಮಜೀದ್ ಮುಸ್ತಫಾ ಅವರು ಉದನೂರು ಗ್ರಾಮದ ಜಮೀನನ್ನು ಖರೀದಿಸಿ, 150 ನಿವೇಶನಗಳನ್ನಾಗಿ ರೂಪಿಸಿ ಮಾರಾಟ ಮಾಡಿದ್ದರು. ಈ ಪೈಕಿ ಇರ್ಷಾದ್ ಅಹ್ಮದ್ ಎಂಬುವರು ಮೂರು ನಿವೇಶನಗಳನ್ನು 15 ಸಾವಿರ ರೂ. ಗೆ ಖರೀದಿಸಿದ್ದರು. ಆದರೆ, ಆ ನಿವೇಶನಗಳು ರಸ್ತೆಗೆ ಒಳಪಟ್ಟಿದ್ದರಿಂದ ಹಣ ಹಿಂದಿರುಗಿಸುವಂತೆ ಇರ್ಷಾದ್ ಕೇಳಿದ್ದರು. ಇದಕ್ಕೆ ಕಾಲಾವಕಾಶ ಕೋರಿದ್ದ ಮುಸ್ತಫಾ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ದೂರುದಾರರಿಗೆ 10 ಲಕ್ಷ ರೂ. ಪಾವತಿಸಲು ಮೂರು ತಿಂಗಳ ಕಾಲಾವಕಾಶ ಕೊಡಿಸುವಂತೆ ಠಾಣಾಧಿಕಾರಿಗಳ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಕಾನ್‌ಸ್ಟೇಬಲ್ ಭೀಮಾನಾಯಕ 60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 30 ಸಾವಿರ ರೂ. ನೀಡಲು ದೂರುದಾರರು ಒಪ್ಪಿಕೊಂಡಿದ್ದರು. ಲಂಚದ ಬೇಡಿಕೆಯನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಂಡ ಅವರು, 2022ರ ಜೂ.9ರಂದು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಅಂದಿನ ಲೋಕಾಯುಕ್ತ ಡಿವೈಎಸ್ಪಿ ಸಂತೋಷ ಬನ್ನಟ್ಟಿ ಅವರು ಪ್ರಕರಣ ದಾಖಲಿಸಿಕೊಂಡಿದ್ದರು. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಬಾಬಾಸಾಹೇಬ ಪಾಟೀಲ್ ಅವರು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಭೀಮಾನಾಯಕ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದರು. ಬಳಿಕ ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ ಅವರು ತನಿಖೆ ಪೂರ್ಣಗೊಳಿಸಿ, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಕಲಂ 7(ಎ) ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದ ಆಲಿಸಿದ ಬಳಿಕ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಕಲಂ 7(ಎ) ಅಡಿಯಲ್ಲಿ ಭೀಮಾನಾಯಕ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ನ.25ರಂದು ತೀರ್ಪು ಪ್ರಕಟಿಸಿದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್.ಚಾಂದಕವಠ ವಾದ ಮಂಡಿಸಿದ್ದರು. ಲೋಕಾಯುಕ್ತ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಹಣಮಂತರಾಯ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಗುಂಡುರಾವ್ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದರು.