Kalaburagi | ಗುಳೆ ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ
ಅಧಿಕಾರಿಗಳ ಭರವಸೆ ನಂತರ ಧರಣಿ ತಾತ್ಕಾಲಿಕ ವಾಪಸ್
ಕಲಬುರಗಿ: ಕೃಷಿ ಕೂಲಿಕಾರರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ತಾಲ್ಲೂಕಿನ ಕೆಲ್ಲೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಹಮ್ಮಿಕೊಂಡಿದ್ದ ಹಗಲು-ರಾತ್ರಿ ನಿರಂತರ ಧರಣಿಯನ್ನು ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಅಕ್ಟೋಬರ್ 28ರಂದು ಆರಂಭಗೊಂಡ ಧರಣಿಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ, ಅವುಗಳನ್ನು ಈಡೇರಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಹೋರಾಟಗಾರರು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ವಿಬಿಜಿ ರಾಮಜಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಕೃಷಿ ಕೂಲಿಕಾರರಿಗೆ ಉದ್ಯೋಗ ಕಲ್ಪಿಸುವ ಮೂಲಕ ವಲಸೆ ತಡೆಯಬೇಕು. ಪ್ರತಿ ವಾರ ನಿರಂತರವಾಗಿ 125 ದಿನಗಳ ಕೆಲಸ ಒದಗಿಸಬೇಕು. ಶಾಕಾಪುರ ಹಾಗೂ ಅವರಾದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು. ಶಾಕಾಪುರದಲ್ಲಿ ಐದು ವರ್ಷಗಳ ಹಿಂದೆ ನಿರ್ಮಿಸಲಾದ ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ಅವರಾದ ಗ್ರಾಮದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ತಕ್ಷಣ ಶೌಚಾಲಯ ನಿರ್ಮಿಸಬೇಕು. ಜಾಬ್ ಕಾರ್ಡ್ ಇಲ್ಲದ ಕುಟುಂಬಗಳಿಗೆ ಹೊಸ ಕಾರ್ಡ್ಗಳನ್ನು ವಿತರಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿದ್ದವು.
ಬೇಡಿಕೆಗಳಿಗೆ ಸ್ಪಂದಿಸಿ ಅವುಗಳನ್ನು ಈಡೇರಿಸುವ ಭರವಸೆ ನೀಡಿದ ಅಧಿಕಾರಿಗಳಿಗೆ ಹೋರಾಟಗಾರರು ಧನ್ಯವಾದ ಸಲ್ಲಿಸಿದರು. ಆದರೆ, ಭರವಸೆಗಳನ್ನು ಶೀಘ್ರ ಅನುಷ್ಠಾನಗೊಳಿಸದಿದ್ದರೆ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಧರಣಿಯಲ್ಲಿ ದವಲಸಾಬ್ ನದಾಫ್, ಮಲ್ಲಮ್ಮ ಕೂಡ್ಲಿ, ಪರಶುರಾಮ ಬಡಿಗೇರ, ಸಾಬಯ್ಯ ಗುತ್ತೇದಾರ, ದೇವೀಂದ್ರ ನಾಯ್ಕೋಡಿ, ನಿಂಗಪ್ಪ ಕೂಡಮನಳ್ಳಿ, ಬಸವರಾಜ ಪರತಹಬಾದ, ನಿಂಗಮ್ಮ ಕವಲ್ದಾರ್, ಯಂಕಮ್ಮ ಕೆಲ್ಲೂರು ಸೇರಿದಂತೆ ನೂರಾರು ಮಹಿಳೆಯರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.