Kalaburagi | ಮಳೆ ಕೊರತೆ ; ಬಿತ್ತನೆಗೆ ಕ್ರಿಯಾ ಯೋಜನೆ ರೂಪಿಸಿಕೊಳ್ಳಿ : ಅಧಿಕಾರಿಗಳಿಗೆ ಪಂಕಜ್ ಕುಮಾರ ಪಾಂಡೆ ಸೂಚನೆ
ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ
ಕಲಬುರಗಿ: ಮುಂಗಾರು ಋತುವಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಮಳೆಯ ನಿರೀಕ್ಷೆಯೊಂದಿಗೆ ಬಿತ್ತನೆಗೆ ಅಗತ್ಯವಾದ ಸಮಗ್ರ ಕ್ರಿಯಾ ಯೋಜನೆ ರೂಪಿಸಿಕೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೀಜ ಮತ್ತು ರಸಗೊಬ್ಬರ ಕೊರತೆ ಉಂಟಾಗದಂತೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಬೇಕು. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಳೆ ಕೊರತೆ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಬಾವಿ, ಕೊಳವೆಬಾವಿ ಸೇರಿದಂತೆ ಪರ್ಯಾಯ ಜಲಮೂಲಗಳ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಜನರು ಹಾಗೂ ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.
ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ, ಕಲಬುರಗಿ ನಗರಕ್ಕೆ ನಾರಾಯಣಪುರ ಜಲಾಶಯದಿಂದ ನೀರು ತರಲು 1,850 ಕೋಟಿ ರೂ. ವೆಚ್ಚದ ಪೈಪ್‌ಲೈನ್ ಯೋಜನೆಯ ಡಿಪಿಆರ್ ಸಿದ್ಧವಾಗಿದೆ. ಸದ್ಯ ನೀರಿನ ಸಮಸ್ಯೆ ಎದುರಿಸುತ್ತಿರುವ ವಾರ್ಡ್‌ಗಳಿಗೆ ಪ್ರತಿದಿನ 160 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಖರೀಫ್ ಬಿತ್ತನೆ ಕೇವಲ ಶೇ.30ರಷ್ಟು ಮಾತ್ರ ಪೂರ್ಣಗೊಂಡಿದೆ. 20,301 ಕ್ವಿಂಟಾಲ್ ಬೀಜ ವಿತರಿಸಲಾಗಿದ್ದು, ಇನ್ನೂ 6,395 ಕ್ವಿಂಟಾಲ್ ದಾಸ್ತಾನಿದೆ. 45,935 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದ್ದು, 33,725 ಮೆಟ್ರಿಕ್ ಟನ್ ಸಂಗ್ರಹವಿದೆ ಎಂದು ತಿಳಿಸಿದರು.
ರಸಗೊಬ್ಬರ ಕಾಳಬಜಾರ್ ತಡೆಗಟ್ಟಲು 168 ಕೃಷಿ ಪರಿಕರ ಅಂಗಡಿಗಳ ಮೇಲೆ ದಾಳಿ ನಡೆಸಿ, 51 ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದ ನಾಲ್ಕು ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಕಂದಾಯ ಇಲಾಖೆಯ ಪ್ರಗತಿ ವಿವರ ಮಂಡಿಸಿದರು. ಬಳಿಕ ಪಂಕಜ್ ಕುಮಾರ ಪಾಂಡೆ ಅವರು ಸರ್ಕಾರಿ ಜಮೀನುಗಳ ಸಂರಕ್ಷಣೆಗೆ ಎಐ ಆಧಾರಿತ ಸ್ಯಾಟಲೈಟ್ ತಂತ್ರಜ್ಞಾನ ಬಳಕೆ, ಕೈಗಾರಿಕೆಗಳಿಗೆ ಲ್ಯಾಂಡ್ ಬ್ಯಾಂಕ್ ಗುರುತಿಸುವುದು ಹಾಗೂ ಸಂಸ್ಕರಿತ ನೀರಿನ ಬಳಕೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಅಂತ್ಯದಲ್ಲಿ ಅವರು ಕೃಷಿ ಇಲಾಖೆಯ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕುರಿತ ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನುರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಣ್ಮಣ ಶೃಂಗೇರಿ, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಪ್ರಭುರೆಡ್ಡಿ, ತೋಟಗಾರಿಕೆ ಜಂಟಿ ನಿರ್ದೇಶಕ ಸಂತೋಷ ಇನಾಂದಾರ, ಡಿ.ಡಿ.ಪಿ.ಐ ಶಂಕ್ರಮ್ಮ ಢವಳಗಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಡಿ.ಐ.ಸಿ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಂಜಯ್ ರೆಡ್ಡಿ, ಸಣ್ಣ ನೀರಾವರಿ, ಕೆ.ಎನ್.ಎನ್.ಎಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.