Kalaburagi | ಜಾತಿ ಇನ್ನೂ ಮನಸ್ಸಿನಲ್ಲಿ ಜೀವಂತ; ನಿರ್ಮೂಲನೆಗೆ ನಿರಂತರ ಹೋರಾಟ ಅಗತ್ಯ : ಡಿ.ಜಿ.ಸಾಗರ
'ಕಾಲದ ಕಟ್ಟಳೆ ಮೀರಿ' ಕೃತಿ ಬಿಡುಗಡೆ
ಕಲಬುರಗಿ : ಜಾತಿ ಎನ್ನುವುದು ಕಣ್ಣಿಗೆ ಕಾಣುವ ವಸ್ತುವಲ್ಲ, ಅದು ಮನಸ್ಸಿನ ವ್ಯವಹಾರವಾಗಿದೆ. ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದರೂ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಇನ್ನೂ ಸಮಾಜದಲ್ಲಿ ಜೀವಂತವಾಗಿವೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ. ಸಾಗರ ಕಳವಳ ವ್ಯಕ್ತಪಡಿಸಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಹರಿಹರ ಸಭಾಂಗಣದಲ್ಲಿ ಕೌದಿ ಪ್ರಕಾಶನ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಬರಹಗಾರ ಡಾ. ಪಿ. ನಂದಕುಮಾರ್ ಅವರ ‘ಕಾಲದ ಕಟ್ಟಳೆ ಮೀರಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಬಹುತೇಕ ಎಲ್ಲ ಆಯಾಮಗಳನ್ನು ಇಂದಿಗೂ ಜಾತಿಯೇ ನಿರ್ಧರಿಸುತ್ತಿದೆ ಎಂದು ಹೇಳಿದರು.
ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ಹಲವು ಕಾನೂನುಗಳು ಜಾರಿಯಾಗಿದ್ದರೂ, ಅವುಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಸರ್ಕಾರಗಳು ವಿಫಲವಾಗಿವೆ. ದಲಿತ ಚಳುವಳಿಯ ಹಿಂದೆ ಸಾವಿರಾರು ಹೋರಾಟಗಾರರ ತ್ಯಾಗವಿದ್ದು, ಜಾತಿ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯು ಶೋಷಣೆ, ಅಪಮಾನ ಮತ್ತು ಬಡತನ ನಿರ್ಮೂಲನೆಗಾಗಿ ಹುಟ್ಟಿಕೊಂಡ ಸಂಘಟನೆಯಾಗಿದ್ದು, ಸಮಾಜದಲ್ಲಿನ ಅಂಧಶ್ರದ್ಧೆ, ಮೌಢ್ಯತೆ ಮತ್ತು ಶೋಷಣೆಯ ವಿರುದ್ಧ ಪ್ರಶ್ನಿಸುವ ಮನೋಭಾವ ಬೆಳೆಸುವುದು ಅದರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಬರವಣಿಗೆ ಇಲ್ಲದೆ ಯಾವುದೇ ಚಳುವಳಿ ಬೆಳೆಯುವುದಿಲ್ಲ. ಹೊಸ ಬರಹಗಾರರನ್ನು ಪ್ರೋತ್ಸಾಹಿಸಬೇಕು. ಹಿರಿಯ ಚಿಂತಕ ಡಾ. ಸಿದ್ಧಲಿಂಗಯ್ಯ ಅವರು ಸಾಹಿತ್ಯ ಮತ್ತು ಚಳುವಳಿಯ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ರೀತಿ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಸ್ಮರಿಸಿದರು.
ಎಸ್‌ಸಿಪಿ-ಟಿಎಸ್‌ಪಿ, ವಸತಿ ಶಾಲೆಗಳಂತಹ ಅನೇಕ ಕಲ್ಯಾಣ ಕಾರ್ಯಕ್ರಮಗಳು ಹೋರಾಟಗಳ ಫಲವಾಗಿ ಜಾರಿಯಾಗಿವೆ. ಆದರೂ ಇಂದಿಗೂ ಅನೇಕ ಗ್ರಾಮಗಳಲ್ಲಿ ಅಸ್ಪೃಶ್ಯತೆ ಮುಂದುವರಿದಿರುವುದು ವಿಷಾದನೀಯ ಎಂದು ಹೇಳಿದರು.
ದೇಶದಲ್ಲಿ ಮನುವಾದದ ಪ್ರಭಾವ ಹೆಚ್ಚುತ್ತಿದ್ದು, ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ನಿರುದ್ಯೋಗ, ಕೌಶಲ್ಯಾಭಿವೃದ್ಧಿ, ಸಾಕ್ಷರತೆ ಹಾಗೂ ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದ ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕೃತಿ ಪರಿಚಯಿಸಿದ ಪ್ರಾಧ್ಯಾಪಕ ಡಾ. ಅರುಣ್ ಜೋಳದಕೂಡ್ಲಗಿ, ಉತ್ತಮ ವಿಮರ್ಶೆಗೆ ಆಳವಾದ ಅಧ್ಯಯನ ಅಗತ್ಯವಾಗಿದ್ದು, ಸಾಹಿತ್ಯವು ಸಮಾಜ ಪರಿವರ್ತನೆಗೆ ಪರಿಣಾಮಕಾರಿ ಸಾಧನವಾಗಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರು ದಲಿತ ಚಳುವಳಿಯ ಪ್ರಜ್ಞೆಯಲ್ಲಿ ಕೆಲಸ ಮಾಡಿದ ಮಹನೀಯರ ಚಿಂತನೆಗಳನ್ನು ಅಧ್ಯಯನ ಮಾಡುವುದು ಅಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಮೃತರಾವ್ ಹಿರೇಮನಿ ಮಾತನಾಡಿದರು. ಕೃತಿಯ ಲೇಖಕ ಡಾ. ಪಿ. ನಂದಕುಮಾರ್ ವೇದಿಕೆಯ ಮೇಲಿದ್ದರು.
ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಪ್ರೊ ವಿಕ್ರಮ್ ವಿಸಾಜಿ, ಡಾ.ಕಿರಣ ಗಾನಜೂರು ಸಾಹಿತಿ ಡಾ ಸೂರ್ಯಕಾಂತ ಸುಜ್ಯಾತ, ಶ್ರೀಶೈಲ ನಾಗರಾಳ, ಸಿಂಡಿಕೆಟ್ ಸದಸ್ಯ ಎಸ್.ಪಿ ಸುಳ್ಳದ್, ಅಶೋಕ ಅಂಬಲಿಗಿ, ಎಚ್.ಶಂಕರ, ಬಿ.ಸಿ ವಾಲಿ, ಅಂಬಣ್ಣ ಜಿವಣಗಿ, ದತ್ತಾತ್ರೇಯ ಇಕ್ಕಳಕಿ, ದಲಿತ ಮುಖಂಡ ಸುರೇಶ ಹಾದಿಮನಿ ಹಾಗೂ ಕಲಾ ನಿಕಾಯದ ಎಲ್ಲ ಅಥಿತಿ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಡಾ. ಎಂ. ಬಿ. ಕಟ್ಟಿ ಸ್ವಾಗತಿಸಿದರು. ಡಾ. ಕಿರಣ ವಲ್ಲೇಪುರಿ ನಿರೂಪಿಸಿದರು. ಸಿದ್ಧಾರ್ಥ ಚಿಮ್ಮ ಇದಲಾಯಿ ಕ್ರಾಂತಿಗೀತೆ ಹಾಡಿದರು, ರಾಹುಲ ವಂದರ್ನಾಪಣೆ ಮಾಡಿದರು.