×
Ad

Kalaburagi | ಲೈಟ್ ಕೆಟ್ಟು ಕತ್ತಲಲ್ಲೇ ಪ್ರಯಾಣ: ಕೆಎಸ್‌ಆರ್‌ಟಿಸಿ ಬಸ್‌ನ ಅವ್ಯವಸ್ಥೆಗೆ ಪ್ರಯಾಣಿಕರ ಅಸಮಾಧಾನ

ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಾಲನೆ : ಆರೋಪ

Update: 2026-07-04 21:42 IST

ಕಲಬುರಗಿ: ಕಲಬುರಗಿ–ಚಿಂಚೋಳಿ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಲಾಸ್ಟ್ ಬಸ್ ಕಳೆದ ಹಲವು ತಿಂಗಳುಗಳಿಂದ ನಿರಂತರ ತಾಂತ್ರಿಕ ದೋಷಗಳಿಂದ ಬಳಲುತ್ತಿದ್ದು, ರಾತ್ರಿ ವೇಳೆಯ ಪ್ರಯಾಣದಲ್ಲಿ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರತಿದಿನ ರಾತ್ರಿ 7.30ಕ್ಕೆ ಕಲಬುರಗಿ ಬಸ್ ನಿಲ್ದಾಣದಿಂದ ಚಿಂಚೋಳಿಗೆ ಹೊರಡುವ ಈ ಬಸ್ ಸುಮಾರು 84 ಕಿಲೋಮೀಟರ್ ದೂರ ಸಂಚರಿಸುತ್ತದೆ. ಆದರೆ ಬಸ್‌ನ ಲೈಟ್ ವ್ಯವಸ್ಥೆ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಪದೇಪದೇ ಉಂಟಾಗುತ್ತಿರುವುದರಿಂದ ರಾತ್ರಿ ಪ್ರಯಾಣ ಅಪಾಯಕಾರಿಯಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಬಸ್‌ನ ಮುಂಭಾಗದ ಬೆಳಕಿನ ಸಮಸ್ಯೆ ಉಂಟಾದ ಸಂದರ್ಭಗಳಲ್ಲಿ ನಿರ್ವಾಹಕರು ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಚಾಲಕರಿಗೆ ಮಾರ್ಗದರ್ಶನ ನೀಡುತ್ತಿರುವ ದೃಶ್ಯಗಳು ಆತಂಕಕ್ಕೆ ಕಾರಣವಾಗಿವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಕೂಡ ಇದೇ ಬಸ್‌ನಲ್ಲಿ ಪ್ರಯಾಣಿಸಿದವರು ಕತ್ತಲೆಯಲ್ಲೇ ಪ್ರಯಾಣಿಸುವ ಅನಿವಾರ್ಯತೆ ಎದುರಿಸಿದ್ದಾಗಿ ಆರೋಪಿಸಿದ್ದು, ಸುರಕ್ಷತೆ ದೃಷ್ಟಿಯಿಂದ ಈ ಮಾರ್ಗಕ್ಕೆ ಹೊಸ ಬಸ್ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಮಾರ್ಗದಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಗ್ರಾಮೀಣ ಭಾಗದ ನೂರಾರು ಪ್ರಯಾಣಿಕರು ಪ್ರತಿನಿತ್ಯ ಸಂಚರಿಸುತ್ತಿದ್ದು, ನಿರಂತರ ತಾಂತ್ರಿಕ ದೋಷಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಚಿಂಚೋಳಿ ಮಾರ್ಗಕ್ಕೆ ಸುಗಮ ಮತ್ತು ಸುರಕ್ಷಿತ ಸೇವೆ ಕಲ್ಪಿಸಲು ಹೊಸ ಬಸ್ ನಿಯೋಜಿಸುವುದರ ಜೊತೆಗೆ ಹಳೆಯ ಬಸ್‌ಗಳ ಲೈಟ್ ಸೇರಿದಂತೆ ಅಗತ್ಯ ದುರಸ್ತಿ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News