×
Ad

Afzalpur | ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರ ವಹಿಸಿ : ಡಾ.ಫಾರೂಕ್ ಮಣ್ಣೂರ

Update: 2026-07-04 21:06 IST

ಅಫಜಲಪುರ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಪೂರ್ಣಗೊಳಿಸಬೇಕು. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ ಎಂದು ಕಲಬುರಗಿ ಸಮಾಜ ಸೇವಕ ಡಾ. ಫಾರೂಕ್ ಮಣ್ಣೂರ ಹೇಳಿದರು.

ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಆಯೋಜಿಸಿದ್ದ ಎಸ್‌ಐಆರ್ ಜಾಗೃತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಮತದಾರ ಮಾಹಿತಿ ಅರ್ಜಿ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಿ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸಲ್ಲಿಸುವುದು ಪ್ರತಿಯೊಬ್ಬ ಮತದಾರರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಮನೆಗೆ ಭೇಟಿ ನೀಡುವ ಬಿಎಲ್‌ಒಗಳಿಂದ ಅಧಿಕೃತ ಸ್ವೀಕೃತಿ ರಶೀದಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಅರ್ಜಿಗಳನ್ನು ಸ್ವತಃ ಪರಿಶೀಲಿಸಿ ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಪರಿಶೀಲಿಸುವುದೂ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಫಾರಂ ಭರ್ತಿ ಮಾಡುವ ಕೆಲಸವನ್ನು ಇತರರ ಮೇಲೆ ಅವಲಂಬಿಸದೇ ಪ್ರತಿಯೊಬ್ಬರೂ ಸ್ವತಃ ಪರಿಶೀಲಿಸಿ ಸಲ್ಲಿಸಬೇಕು ಎಂದು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ತಹಶೀಲ್ದಾರ್ ನಿಸಾರ್ ವಜೀರ್, ಎಸ್‌ಐಆರ್ ಕುರಿತು ಸಮಾಜದಲ್ಲಿ ಅನಗತ್ಯ ಭಯ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ವದಂತಿಗಳಿಗೆ ಕಿವಿಗೊಡದೇ ಅಧಿಕೃತ ಮಾಹಿತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಕ್ಬೂಲ್ ಪಟೇಲ್, ಹಫೀಜ್ ಮೌಲಾನಾ, ಪಾಷಾ ಮಣ್ಣೂರ, ಜಾಫರ್ ಪಟೇಲ್, ಕಾಸೀಂಸಾಬ ಮುಜಾವರ, ರಿಯಾಜ್ ಹಿಂದೂಸ್ತಾನ, ಗಾಲೀಬ ಮುಜಾವರ, ಸೋಂದು ನಗಾಚಿ, ಅಮೀರ ಮುಜಾವರ, ಹಾಜಿ ಜೈನುಸಾಬ ಅಪರಾಧ, ಗೌಸ್ ಖಾಜಿ, ಬಿಲಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News