ಕಲಬುರಗಿ | ಆರೆಸ್ಸೆಸ್ ಪಥ ಸಂಚಲನ ವಿವಾದ: ಶಾಂತಿಸಭೆಗೆ ಹಾಜರಾಗಲು 10 ಸಂಘಟನೆಗಳಿಗೆ ನೋಟಿಸ್
ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್ 2ರಂದು ನಡೆಯಲಿರುವ ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ಪಥ ಸಂಚಲನಗಳ ವಿವಾದಗಳನ್ನು ಬಗೆಹರಿಸಲು ಕಲಬುರಗಿ ಹೈ ಕೋರ್ಟ್ ಪೀಠದ ನಿರ್ದೇಶನದಂತೆ ಜಿಲ್ಲಾಡಳಿತ ಅ.28ರಂದು ಶಾಂತಿಸಭೆ ನಿಗದಿಪಡಿಸಿದೆ. ಸಭೆಗೆ ಹಾಜರಾಗುವಂತೆ 10 ಸಂಘಟನೆಗಳಿಗೆ ನೋಟಿಸ್ ನೀಡಿ ಆಹ್ವಾನಿಸಲಾಗಿದೆ.
ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್, ಸೇಡಂ ಸಹಾಯ ಆಯುಕ್ತರು, ಚಿತ್ತಾಪೂರ ತಹಶೀಲ್ದಾರ್, ಪುರಸಭೆಯ ಮುಖ್ಯಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡಿರು ಶ್ರೀನಿವಾಸಲು, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ, ಶಹಾಬಾದ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರು, ಚಿತ್ತಾಪುರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಅ.28 ರಂದು ಪೂರ್ವಾಹ್ನ 11:30ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಸಂಭಾಗಣದಲ್ಲಿ ಶಾಂತಿಸಭೆ ನಿಗದಿಪಡಿಸಲಾಗಿದೆ.
ಆರೆಸ್ಸೆಸ್, ಭಾರತೀಯ ದಲಿತ ಪ್ಯಾಂಥರ್ (ರಿ), ಭೀಮ್ ಆರ್ಮಿ, ರಾಜ್ಯ ಯುವ ಘಟಕ, ಗೊಂಡ-ಕುರುಬ ಎಸ್.ಟಿ. ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ (ರಿ), ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಘಟಕ, ಬೀದರ್ ನ ಕ್ರಿಶ್ಚಿಯನ್ ಹೌಸ್ ನ ಸಂಜಯ ಜಾಗೀರದಾರ, ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗ, ಡಾ.ವಿಠಲ ದೊಡ್ಡಮನಿ, ಸಂತೋಷ ಬಿ. ಪಾಳಾ ಅವರಿಗೆ ಸಭೆಯ ಬಗ್ಗೆ ನೋಟಿಸ್ ನೀಡಲಾಗಿದೆ. ಸಭೆಗೆ ಪ್ರತಿ ಸಂಘಟನೆಯಿಂದ ಗರಿಷ್ಠ ಮೂವರು ಹಾಜರಾಗಿ, ಲಿಖಿತ ಹೇಳಿಕೆ ಸಲ್ಲಿಸಲು ಬಯಸುವ ಸಂಘಟನೆಗಳು ಸಭೆಯಲ್ಲಿ ಲಿಖಿತ ಹೇಳಿಕೆ ಸಲ್ಲಿಸಬಹುದೆಂದು ನೋಟೀಸ್ ನಲ್ಲಿ ತಿಳಸಲಾಗಿದೆ.
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನವನ್ನು ವಿರೋಧಿಸಿ ನವೆಂಬರ್ 2 ರಂದು ಭೀಮ್ ಆರ್ಮಿ, ದಲಿತ್ ಪ್ಯಾಂಥರ್, ಹಸಿರು ಸೇನೆ, ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಶನ್, ಎಸ್.ಟಿ. ಪಟ್ಟಿಗೆ ಸೇರಿಸಲು ಆಗ್ರಹಿಸುವ ಕುರುಬ ಸಮುದಾಯ ಸೇರಿದಂತೆ ಏಳು ಸಂಘಟನೆಗಳು ತಮಗೂ ಅದೇ ದಿನ ಪ್ರತಿಭಟನೆ ಮತ್ತು ಪಥ ಸಂಚಲನ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿವೆ.