ಕಲಬುರಗಿ| ಸೆಪ್ಸಿಸ್ ಸೋಂಕು ಮೂಕ ಕೊಲೆಗಾರ: ಡಾ.ಶರಣಬಸಪ್ಪ ಹರವಾಳ
ಕಲಬುರಗಿ: ಸೆಪ್ಸಿಸ್ ಎಂದರೆ ನಿಮ್ಮ ದೇಹದ ಅತಿಯಾದ ಮತ್ತು ಜೀವಕ್ಕೆ ಅಪಾಯಕಾರಿಯಾದ ಪ್ರತಿಕ್ರಿಯೆಯಾಗಿದ್ದು, ಇದು ಸೋಂಕಿನಿಂದ ಉಂಟಾಗುತ್ತದೆ. ಇದನ್ನು ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರಾದ ಡಾ.ಶರಣಬಸಪ್ಪ ಹರವಾಳ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿದ ಮೈಕ್ರೋಬಾಯಲಾಜಿ ವಿಭಾಗದಿಂದ ಜರುಗಿದ "ಸೆಪ್ಸಿಸ್ ಊಹಿಸಬೇಡಿ, ಪತ್ತೆಮಾಡಿ" ವಿಷಯದ ಕುರಿತು ಜರುಗಿದ ಸಿ ಎಮ್ ಇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಶರಣಬಸಪ್ಪ ಹರವಾಳ, ಇದು ಹೆಚ್ಚಿನ ಜನರಿಗೆ ತುಂಬಾ ಪರಿಚಿತವಲ್ಲದಿರಬಹುದು, ಆದರೆ ವಾಸ್ತವವಾಗಿ ಇದು ನಮ್ಮಿಂದ ದೂರವಿಲ್ಲ. ಗಂಭೀರ ಕಾಯಿಲೆಯಾಗಿ, ಸೆಪ್ಸಿಸ್‌ನ ಅನಾರೋಗ್ಯ ಮತ್ತು ಮರಣ ಪ್ರಮಾಣವು ಹೆಚ್ಚಾಗಿರುತ್ತದೆ. ಪ್ರತಿ ವರ್ಷ ವಿಶ್ವಾದಾದ್ಯಂತ ಸುಮಾರು 20 ರಿಂದ 30 ಮಿಲಿಯನ್ ಸೆಪ್ಸಿಸ್ ಪ್ರಕರಣಗಳು ಕಂಡುಬರುತ್ತವೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿದ್ದ ಬಸವೇಶ್ವರ ಆಸ್ಪತ್ರೆಯ ಸಂಚಾಲಕ ಡಾ.ಕಿರಣ್ ದೇಶಮುಖ್ ಮಾತನಾಡಿ, ಸೆಪ್ಸಿಸ್ ಚಿಕಿತ್ಸೆಯಲ್ಲಿ ಸಮಯವು ಅತ್ಯಗತ್ಯ ಮತ್ತು ಸೆಪ್ಸಿಸ್‌ನ ಆರಂಭಿಕ ಗುರುತಿಸುವಿಕೆ ಚಿಕಿತ್ಸೆಯ ಅತ್ಯಂತ ನಿರ್ಣಾಯಕ ಭಾಗವಾಗಿದೆ. ಇತ್ತೀಚೆಗೆ ಬ್ಯಾಕ್ಟೀರಿಯಾದ ಸೋಂಕಿನ ಆರಂಭಿಕ ರೋಗನಿರ್ಣಯಕ್ಕೆ ಹೆಪಾರಿನ್-ಬೈಂಡಿಂಗ್ ಪ್ರೋಟೀನ್ (HBP) ಉದಯೋನ್ಮುಖ ಗುರುತುಗಳಲ್ಲಿ ಒಂದಾಗಿದೆ ಎಂದು ಸಾಬೀತಾಗಿದೆ. ಇದು ವೈದ್ಯರು ಸೆಪ್ಸಿಸ್ ರೋಗಿಗಳನ್ನು ಸಾಧ್ಯವಾದಷ್ಟು ಬೇಗ ಪತ್ತೆಹಚ್ಚಲು ಮತ್ತು ಚಿಕಿತ್ಸೆಯ ಪರಿಣಾಮಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ವೈದ್ಯಕೀಯ ಆಡಳಿತ ಮಂಡಳಿ ಸದಸ್ಯರಾದ ಡಾ ಗುರುಲಿಂಗಪ್ಪ ಪಾಟೀಲ್, ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ್, ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ ಬಂಡಾರ, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ವೈದ್ಯಕೀಯ ಅಧೀಕ್ಷಕರಾದ ಡಾ.ಮಲ್ಲಿಕಾರ್ಜುನ ತೇಗನೂರ, ಡಾ.ಗಿರಿಧರ ಹಾವನೂರು, ಡಾ ಶಿಲ್ಪಾ ಪ್ರಧಾನ್, ಡಾ.ಬಸವರಾಜ ಪಾಟೀಲ್, ಶಿಬಾ ಪರ್ವೀನ್, ಶರಣಮ್ಮ ಬಿರಾದಾರ್ ಉಪಸ್ಥಿತರಿದ್ದರು.
ಡಾ.ಪರಮೇಶ್ ಬಿರಾದಾರ್ ಸ್ವಾಗತಿಸಿದರು. ಡಾ.ಉಡಚಾಣ ಕಾರ್ಯಕ್ರಮ ನಿರೂಪಿಸಿದರು, ಡಾ.ಪ್ರೀತಿ ಹುಗ್ಗಿ ವಂದಿಸಿದರು.