×
Ad

ಲಲಿತಕಲಾ ಅಕಾಡೆಮಿಯ ಹೆಸರು ಬದಲಾವಣೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ: ಕಲಾವಿದ ರೆಹಮಾನ್ ಪಟೇಲ್

Update: 2025-12-15 19:19 IST

ಕಲಬುರಗಿ: ಕರ್ನಾಟಕ ಲಲಿತಕಲಾ ಅಕಾಡೆಮಿಯ ಹೆಸರನ್ನು ಬದಲಾಯಿಸುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಕಲಬುರಗಿ ಖ್ಯಾತ ಕಲಾವಿದ, ಸಂಶೋಧಕ ರೆಹಮಾನ್ ಪಟೇಲ್ ಹೇಳಿದ್ದಾರೆ.

ಲಲಿತಕಲಾ ಅಕಾಡೆಮಿಯ ಹೆಸರು ಬದಲಿಸುವ ಕುರಿತು ಸಲಹೆಗಳನ್ನು ಕೋರಿ ಅಕಾಡೆಮಿ ಕಳುಹಿಸಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ರೆಹಮಾನ್ ಪಟೇಲ್, ಹೆಸರನ್ನು ಬದಲಿಸುವುದರಿಂದ ಯಾವುದೇ ಮಹತ್ತರ ಪರಿಣಾಮವಾಗುವುದಿಲ್ಲ. ಕರ್ನಾಟಕ ಲಲಿತಕಲಾ ಅಕಾಡೆಮಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ, ಕಲೆ ಹಾಗೂ ಕಲಾವಿದರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ, ಮಾನ್ಯತೆ ಪಡೆದ ಸರಕಾರಿ ಸಂಸ್ಥೆಯಾಗಿದೆ ಎಂದು ಹೇಳಿದರು.

ಕೇಂದ್ರ ಲಲಿತಕಲಾ ಅಕಾಡೆಮಿಯೂ ಸಹ ಇಂದಿಗೂ ಅದೇ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ತನ್ನ ಹೆಸರನ್ನು ಬದಲಿಸಿಲ್ಲ. ಆದ್ದರಿಂದ ಸಂಸ್ಥೆಯ ಹೆಸರನ್ನು ಬದಲಿಸುವುದರ ಬಗ್ಗೆ ಗಮನಹರಿಸುವ ಬದಲು, ಕಲೆ ಮತ್ತು ಕಲಾವಿದರ ಪ್ರೋತ್ಸಾಹಕ್ಕಾಗಿ ಹೊಸ ಯೋಜನೆಗಳನ್ನು ಆರಂಭಿಸುವತ್ತ ಆಡಳಿತವು ಗಮನಹರಿಸಬೇಕು ಎಂದು ಪಟೇಲ್  ಸಲಹೆ ನೀಡಿದ್ದಾರೆ.

ಅನೇಕ ಪ್ರಾಚೀನ ಕಲಾರೂಪಗಳು ನಿಧಾನವಾಗಿ ಅಳಿದು ಹೋಗುತ್ತಿವೆ. ಈ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ದಾಖಲಿಸುವುದು ಪ್ರಮುಖ ಆದ್ಯತೆಯಾಗಬೇಕು. ಸ್ವತಂತ್ರವಾಗಿ ಫ್ರೀಲಾನ್ಸರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರು ಹಾಗೂ ಸಂಶೋಧನಾ ಪಂಡಿತರಿಗೆ ವಿಶೇಷ ಯೋಜನೆಗಳನ್ನು ರೂಪಿಸುವ ಮೂಲಕ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಲೇಖಕ ಹಾಗೂ ಚಿಂತಕ ಬರಗೂರು ರಾಮಚಂದ್ರಪ್ಪ , ತಮ್ಮ ಭಾಷಣದಲ್ಲಿ ಅಕಾಡೆಮಿಯ ಹೆಸರನ್ನು ‘ಫೈನ್ ಆರ್ಟ್ ಅಕಾಡೆಮಿ’ ಎಂದು ಬದಲಿಸಬೇಕು ಎಂದು ಸಲಹೆ ನೀಡಿದ್ದರು.

ಅವರ ಸಲಹೆಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು, ಅಕಾಡೆಮಿಯ ಅಧ್ಯಕ್ಷ ಪಾ.ಸಾ. ಕುಮಾರ್ ಹಾಗೂ ಇತರ ಸಂಬoಧಿಸಿದ ತಜ್ಞರಿಂದ ಶಿಫಾರಸುಗಳನ್ನು ಪಡೆದ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜೊತೆಗೆ, ಮುಖ್ಯಮಂತ್ರಿಯವರೊoದಿಗೆ ಚರ್ಚಿಸಿದ ಬಳಿಕ ಮುಂದಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದೂ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News