ಕಲಬುರಗಿ| ನಾಲ್ಕು ಪ್ರತ್ಯೇಕ ಕಳ್ಳತನ ಪ್ರಕರಣ: ಐವರು ಆರೋಪಿಗಳ ಬಂಧನ
ಕಲಬುರಗಿ: ಜೇವರ್ಗಿ ಹಾಗೂ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ನಾಲ್ಕು ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.
ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಡ್ಡೂರು ಶ್ರೀನಿವಾಸುಲು, ಶಹಾಬಾದ್ ನಗರದಲ್ಲಿ ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು, ಜಿಲ್ಲೆಯ ಹೊನಗುಂಟಾದ ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಕಳ್ಳತನದ ಆರೋಪಿ ಮಹಾರಾಷ್ಟ್ರ ಮೂಲದ ಚಿರಾಗ್ ರಾಠೋಡ್ ಹಾಗೂ ಗುಡೂರಿನಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಸುನೀಲ್, ಹಣಕ್ಕಾಗಿ ಸಂಬಂಧಿಕರ ಮೇಲೆ ಹಲ್ಲೆ ಮಾಡಿ ಮನೆಯನ್ನು ದೋಚಿ ಪರಾರಿಯಾದ ಮಹಮ್ಮದ್ ಯೂನುಸ್ ನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ 51 ಗ್ರಾಂ ಚಿನ್ನ, 212 ಗ್ರಾಂ ಬೆಳ್ಳಿ ಜಪ್ತಿ ಮಾಡಲಾಗಿದೆ. ಅದೇ ರೀತಿ ಜೇವರ್ಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನವಾಗಿದ್ದ 16 ಗ್ರಾಂ ಚಿನ್ನ ಜಪ್ತಿಗೊಳಿಸಲಾಗಿದೆ. ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಮೋಟಾರ್ ಸೈಕಲ್ ಕಳ್ಳತನ ಮತ್ತು ದೇವಸ್ಥಾನದ ಆಭರಣ ಕಳ್ಳತನ ಪ್ರಕರಣವನ್ನು ಬೇಧಿಸಿ 10 ಗ್ರಾಂ ಚಿನ್ನ ಹಾಗೂ 3 ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.