×
Ad

ದೀಪಾ ಭಾಸ್ತಿ ಉಪನ್ಯಾಸ ರದ್ದುಪಡಿಸಿದ ಕೇಂದ್ರೀಯ ವಿವಿ ನಡೆ ಖಂಡನೀಯ: ಮೀನಾಕ್ಷಿ ಬಾಳಿ

Update: 2025-12-14 14:58 IST

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿಯವರನ್ನು ಆಹ್ವಾನಿಸಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಇದ್ದಕ್ಕಿದ್ದಂತೆ ರದ್ದುಪಡಿಸಿರುವುದು ಖಂಡನೀಯ ಎಂದು ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೀಪಾ ಬಾಸ್ತಿ ಅಂತಾರಾಷ್ಟ್ರೀಯ ಲೇಖಕಿ. ಯಶಸ್ವಿ ಅನುವಾದಕಿಯೂ ಆಗಿದ್ದಾರೆ. ಅವರ ಸಮರ್ಥ ಅನುವಾದದಿಂದಾಗಿ ಕನ್ನಡದ ಖ್ಯಾತ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನಕ್ಕೆ ಅತ್ಯುನ್ನತ ಬೂಕರ್ ಪ್ರಶಸ್ತಿ ಲಭಿಸಿದ್ದು ದೇಶಕ್ಕೆ ಸಂದ ಗೌರವ. ಅವರನ್ನು ಜಗದುದ್ದಗಲಕ್ಕೂ ಅನೇಕ ದೇಶಗಳು ಕರೆದು ಗೌರವಿಸುತ್ತಿವೆ. ಕಿರಿಯ ಲೇಖಕರೊಂದಿಗೆ ಸಂವಾದ, ತರಬೇತಿ ನಡೆಸುತ್ತಿವೆ. ಅಂಥ ಒಬ್ಬ ಅನುವಾದಕಿಯನ್ನು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಆಮಂತ್ರಿಸಿ ಎಲ್ಲ ತಯಾರಿ ಮುಗಿದ ನಂತರ ದೀಪಾ ಬಾಸ್ತಿ ಮುಸ್ಲಿಂ ಮಹಿಳೆಯ ಕೃತಿಯನ್ನು ಅನುವಾದಿಸಿದ್ದಾರೆ ಎಂಬ ಹಿಡನ್ ಕಾರಣಕ್ಕೆ ಧಿಡೀರ್ ತಾಂತ್ರಿಕ ನೆಪವೊಡ್ಡಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಆರೋಪಿಸಿದ್ದಾರೆ.

ದೀಪಾ ಭಾಸ್ತಿ ಬರುತ್ತಿರುವ ವಿಷಯ ತಿಳಿದ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಅವರ 'ಹಾರ್ಟ್ ಲೈಟ್' ಕೃತಿಯನ್ನು ಓದಿಕೊಂಡು ಸಂವಾದ ನಡೆಸಲು ತಯಾರಿ ಮಾಡಿಕೊಂಡು ಕುಳಿತಿದ್ದರಲ್ಲದೆ ಬೂಕರ್ ವಿಜೇತ ಅನುವಾದಕಿಯೊಂದಿಗೆ ಮಾತುಕತೆ ನಡೆಸುವ ಉತ್ಸಾಹದಲ್ಲಿದಲ್ಲಿದ್ದರು. ಆದರೆ ವಿಶ್ವವಿದ್ಯಾಲಯವೊಂದು ತನ್ನ ಕೋಮುವಾದಿ ಕುಟೀಲ ಕಾರಸ್ಥಾನದಿಂದ ಮಕ್ಕಳ ಉತ್ಸಾಹದ ಮೇಲೆ ತಣ್ಣೀರು ಎರೆಚಿದೆ ಎಂದರು.

ತನ್ನ ವಿರೋಧಿ ನೆಲೆಯ ತಾತ್ವಿಕ ಸಿದ್ಧಾಂತಗಳೊಂದಿಗೂ ವಾಗ್ವಾದ ನಡೆಸಿರುವ ಪರಂಪರೆ ಹೊಂದಿರುವ ಭಾರತೀಯ ದಾರ್ಶನಿಕತೆಯನ್ನೂ ಗೌರವಿಸದ ಅಜ್ಞಾನಿಗಳೇ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ತುಂಬಿಕೊಂಡಿದ್ದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಾಗಿಲ್ಲ ಎಂದು ಹೇಳಿದರು.

ಇಂಥದ್ದೊಂದು ಅಪರೂಪದ ಹಾಗೂ ವಿದ್ಯಾರ್ಥಿಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕೌಶಲ್ಯ ಬೆಳೆಸಬಹುದಾಗಿದ್ದ ಕಾರ್ಯಕ್ರಮವನ್ನು ನಿಲ್ಲಿಸಿದ ಅಧಿಕಾರಿಗಳ ಧೂರ್ತತನವನ್ನು ಖಂಡಿಸುತ್ತೇವೆ. ವಿವಿಯ ಘನತೆ ಗೌರವವನ್ನು ಮಣ್ಣು ಮುಕ್ಕಿಸುತ್ತಿರುವ ಇಂಥ ಕೋಮುಕ್ರಿಮಿಗಳನ್ನು ಹೊರದೂಡಬೇಕೆಂದು ಪ್ರೊ.ಆರ್.ಕೆ ಹುಡಗಿ, ಡಾ.ಕಾಶಿನಾಥ ಅಂಬಲಗಿ, ಡಾ ದತ್ತಾ ಇಕ್ಕಳಕಿ, ಡಾ.ಪ್ರಭು ಖಾನಾಪೂರೆ, ಮಾರುತಿ ಗೋಖಲೆ, ಕೋದಂಡರಾಮ, ಮೆಹರಾಜ್ ಪಟೇಲ, ಶ್ರೀಶೈಲ ಘೂಳಿ, ಖೇಮಣ್ಣ ಅಲ್ದಿ, ಭೀಮಾಶಂಕರ ಬಿರಾದಾರ ಸೇರಿದಂತೆ ಹಲವರು ವಿಚಾರವಾದಿಗಳು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News