ಕಲಬುರಗಿ: ಸಾಮಾಜಿಕ ಪರಿವರ್ತನೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್‌) ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸಮುದಾಯದೊಂದಿಗೆ ನೇರವಾಗಿ ಬೆರೆತು, ಅಗತ್ಯವಿರುವವರಿಗೆ ನೆರವಾಗುವ ಮೂಲಕ ಸಮಾಜದ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಹೈದರಾಬಾದ್‌ನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಘಂಟಾ ರಮೇಶ್ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ಎನ್ನೆಸ್ಸೆಸ್‌ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಸಾಮಾಜಿಕ ಪರಿವರ್ತನೆ ಮತ್ತು ರಾಷ್ಟ್ರ ನಿರ್ಮಾಣ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎನ್ನೆಸ್ಸೆಸ್‌ ಸ್ವಯಂಸೇವಕರು ಶಿಕ್ಷಣ, ಸಾಕ್ಷರತೆ, ಕಾನೂನು ಹಾಗೂ ಆರೋಗ್ಯ ಜಾಗೃತಿ, ಹಕ್ಕುಗಳ ಅರಿವು, ಚುನಾವಣಾ ಜಾಗೃತಿ ಮತ್ತು ಆರ್ಥಿಕ ಸಾಕ್ಷರತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅಗತ್ಯವಿರುವವರಿಗೆ ಸೇವೆ ಸಲ್ಲಿಸುವುದು ಹಾಗೂ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವುದು ಶಿಕ್ಷಣದ ಅವಿಭಾಜ್ಯ ಭಾಗವಾಗಿದೆ ಎಂದು ಹೇಳಿದರು.

ಯುವಜನರ ಸಹಾಯಹಸ್ತ ಸಮಾಜಕ್ಕೆ ಅಗತ್ಯವಿದ್ದು, ಸಾಮಾಜಿಕ ಪರಿವರ್ತನೆಗೆ ಎನ್ನೆಸ್ಸೆಸ್‌ ಅನ್ನು ಪರಿಣಾಮಕಾರಿ ಸಾಧನವಾಗಿ ಬಳಸಿಕೊಂಡು ಸಮುದಾಯ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಮಾಜ ಸೇವೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಎನ್ನೆಸ್ಸೆಸ್‌ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020 ಸಮಗ್ರ ಶಿಕ್ಷಣಕ್ಕೆ ಒತ್ತು ನೀಡಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಎನ್ನೆಸ್ಸೆಸ್‌ ಹಾಗೂ ಎನ್‌ಸಿಸಿಯಂತಹ ಚಟುವಟಿಕೆಗಳ ಮಹತ್ವವನ್ನು ಗುರುತಿಸಿದೆ. ಶೈಕ್ಷಣಿಕ ಜ್ಞಾನದ ಜೊತೆಗೆ ಸಮಾಜ ಸೇವೆಯಿಂದ ದೊರೆಯುವ ಪ್ರಾಯೋಗಿಕ ಅನುಭವವು ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆ ಹಾಗೂ ಭವಿಷ್ಯದ ವೃತ್ತಿಜೀವನಕ್ಕೂ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ಇತರರಿಗೆ ನೆರವಾಗುವುದು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವುದೇ ಎನ್ನೆಸ್ಸೆಸ್‌ನ ಮೂಲ ಆಶಯವಾಗಿದೆ. ವಿದ್ಯಾರ್ಥಿಗಳು ಎನ್ನೆಸ್ಸೆಸ್‌ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ವಿಶ್ವವಿದ್ಯಾಲಯದ ಆವರಣವನ್ನು ಸ್ವಚ್ಛ ಹಾಗೂ ಹಸಿರಾಗಿಡುವ ಜವಾಬ್ದಾರಿಯನ್ನೂ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಕ್ಯಾಂಪಸ್ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಸಾಮಾಜಿಕ ಜವಾಬ್ದಾರಿ ಕುರಿತು ಕಿರುನಾಟಕ ಪ್ರದರ್ಶಿಸಿದರು. ವಿಶ್ವವಿದ್ಯಾಲಯದ ಆವರಣದಲ್ಲಿ 60ಕ್ಕೂ ಹೆಚ್ಚು ಗುಲಾಬಿ ಗಿಡಗಳನ್ನು ನೆಟ್ಟು ಗುಲಾಬಿ ತೋಟಕ್ಕೆ ಚಾಲನೆ ನೀಡಲಾಯಿತು.

ಎನ್ನೆಸ್ಸೆಸ್‌ ಅಧಿಕಾರಿ ಹಾಗೂ ಕಾರ್ಯಕ್ರಮ ಸಂಯೋಜಕ ಡಾ.ಬುಚಿ ರೆಡ್ಡಿ ಪೊರೆಡ್ಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಜಿ.ಆರ್. ಅಂಗಡಿ, ಪ್ರೊ. ಎನ್. ಸತ್ಯನಾರಾಯಣ, ಪ್ರೊ. ದೊಡ್ಡಿ, ಡಾ. ಪಿ.ಎಸ್. ಕಟ್ಟಿಮನಿ, ಡಾ. ವಿ. ಸಾಯಿ ಅಭಿನವ, ಪ್ರೊ. ಪ್ರಶಾಂತ್, ಡಾ. ನಲ್ಲಸ್ವಾಮಿ, ಪ್ರೊ. ಜಯವೇಲ್, ಪ್ರೊ. ಅಮರೇಂದ್ರ ಮಸ್ತ, ಪ್ರೊ. ಆನಗುಂಟಿ ಸುರೇಶ್, ಡಾ. ಮಯೂರ್ ಪೂಜಾರ್, ಡಾ. ಮಿಶ್ರಾ, ಡಾ. ಆಶಾಲತ್ ಎಸ್., ಡಾ. ಬಾಗೇವಾಡಿ, ಡಾ. ಎಂ. ಶ್ರೀದೇವಿ, ಡಾ. ನಿಶಾ ಪ್ರಜಾಪತಿ, ಡಾ. ಮಂಡಲ ಚಂದ್ರಶೇಖರಗೌಡ್ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor