Kalaburagi | ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಸ್ವಾಮೀಜಿಗಳ ಭೇಟಿ : ಗೌರವ ನಮನ
ಕಲಬುರಗಿ: ಭಾವೈಕ್ಯತೆ, ಸೌಹಾರ್ದತೆ ಮತ್ತು ಧಾರ್ಮಿಕ ಸಹಬಾಳ್ವೆಯ ಸಂದೇಶ ಸಾರುವ ರೀತಿಯಲ್ಲಿ ಪ್ರಮುಖ ಹಿಂದೂ ಧಾರ್ಮಿಕ ಮುಖಂಡರು ಹಾಗೂ ಸ್ವಾಮೀಜಿಗಳು ಹಝರತ್ ಖ್ವಾಜಾ ಬಂದೇ ನವಾಜ್ (ರ.ಅ) ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಗೌರವ ನಮನ ಸಲ್ಲಿಸಿದರು.
ಸವಣೂರಿನ ದೊಡ್ಡ ಹುಣಸೆ ಕಲ್ಮಠದ ಚನ್ನಬಸವ ಮಹಾಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಮಹಾಸ್ವಾಮೀಜಿ, ಅಕ್ಕಿಮಠದ ಗುರುಲಿಂಗ ಮಹಾಸ್ವಾಮೀಜಿ ಹಾಗೂ ಮುಗುಳಿಯ ಬಸವಲಿಂಗ ಸ್ವಾಮೀಜಿ ಅವರು ಪವಿತ್ರ ದರ್ಗಾಕ್ಕೆ ಭೇಟಿ ನೀಡಿದರು.
ದರ್ಗಾಕ್ಕೆ ಆಗಮಿಸಿದ ಶ್ರೀಗಳನ್ನು ದರ್ಗಾದ ಸಜ್ಜಾದಾ ನಶೀನ್ ಅವರ ಕಿರಿಯ ಸಹೋದರರಾದ ಜನಾಬ್ ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಸಾಹೇಬ್ ಹಾಗೂ ಜನಾಬ್ ಸೈಯದ್ ಅಖೀಬ್ ಹುಸೈನಿ ಸಾಹೇಬ್ ಅವರು ಸಾಂಪ್ರದಾಯಿಕವಾಗಿ ಆತ್ಮೀಯ ಸ್ವಾಗತ ಕೋರಿದರು. ಬಳಿಕ ದರ್ಗಾ ಶರೀಫ್‌ನ ಝಿಯಾರತ್‌ಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಸ್ವಾಮೀಜಿಗಳು ದರ್ಗಾದಲ್ಲಿ ‘ಗುಲ್-ಎ-ಅಖೀದತ್’ (ಪುಷ್ಪ ನಮನ) ಅರ್ಪಿಸಿ, ಫಾತೇಹಾ ಖ್ವಾನಿಯಲ್ಲಿ ಪಾಲ್ಗೊಂಡರು. ನಂತರ ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಅವರು ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸಿ ‘ತಬರ್ರುಕಾತ್’ (ಪ್ರಸಾದ) ವಿತರಿಸಿದರು.
ದರ್ಗಾದ ವಿಶಾಲ ಆವರಣದಲ್ಲಿರುವ ಪ್ರಮುಖ ಸ್ಥಳಗಳಿಗೆ ಶ್ರೀಗಳನ್ನು ಕರೆದೊಯ್ದ ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಅವರು, ಪವಿತ್ರ ದರ್ಗಾದ ಐತಿಹಾಸಿಕ ಹಿನ್ನೆಲೆ, ವಾಸ್ತುಶಿಲ್ಪದ ವೈಶಿಷ್ಟ್ಯ, ಪರಂಪರೆ ಹಾಗೂ ಸೂಫಿ ಸಂತರ ಶಾಂತಿ ಮತ್ತು ಸೌಹಾರ್ದತೆಯ ಸಂದೇಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ದರ್ಗಾ ಪ್ರತಿನಿಧಿಗಳು ನೀಡಿದ ಆತ್ಮೀಯ ಸ್ವಾಗತ, ಆತಿಥ್ಯ ಹಾಗೂ ಗೌರವಕ್ಕೆ ಸ್ವಾಮೀಜಿಗಳು ಸಂತಸ ವ್ಯಕ್ತಪಡಿಸಿ, ದರ್ಗಾದ ಪೀಠಾಧಿಪತಿಗಳು ಹಾಗೂ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಖ್ವಾಜಾ ಬಂದಾ ನವಾಜ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮಿರ್ ವಿಲಾಯತ್ ಅಲಿ, ದರ್ಗಾ ಶರೀಫ್‌ನ ಕಾರ್ಯದರ್ಶಿ ಅಬ್ದುಲ್ ಬಸಿತ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.