ಕಲಬುರಗಿ : ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಲವರ್ಧನೆ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ, ಕೋಮು ಸೌಹಾರ್ದತೆ ಹಾಗೂ ಸಂವಿಧಾನದ ಆಶಯಗಳ ಉಳಿವಿಗಾಗಿ ವಿದ್ಯಾರ್ಥಿಗಳು ಸಂಘಟಿತ ಹೋರಾಟ ನಡೆಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಷ್ಟ್ರೀಯ ಉಪಾಧ್ಯಕ್ಷೆ ಶಿಲ್ಪಾ ಕರೆ ನೀಡಿದರು.

ನಗರದ ಜಗತ್ ವೃತ್ತದಲ್ಲಿ ಗುರುವಾರ ನಡೆದ ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿಯ 17ನೇ ರಾಜ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್), ಶಿಕ್ಷಣದ ಖಾಸಗೀಕರಣ, ಪಠ್ಯಪುಸ್ತಕಗಳಲ್ಲಿನ ಬದಲಾವಣೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳ ಕುರಿತು ಪ್ರಸ್ತಾಪಿಸಿದರು. ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗೆ ವಿದ್ಯಾರ್ಥಿಗಳು ಧ್ವನಿಯಾಗಬೇಕು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದ ಅವರು, ಶಿಕ್ಷಣ ಎಲ್ಲರಿಗೂ ಸಮಾನವಾಗಿ ದೊರೆಯುವಂತೆ ಹೋರಾಟ ರೂಪಿಸಬೇಕು ಎಂದು ಹೇಳಿದರು. ಭಗತ್ ಸಿಂಗ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ. ‘ಅಧ್ಯಯನ ಮತ್ತು ಹೋರಾಟ’ ಎಸ್‌ಎಫ್‌ಐನ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ತಿಮ್ಮಾಪುರ ವೃತ್ತದಿಂದ ಜಗತ್ ವೃತ್ತದವರೆಗೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡ ಬೃಹತ್ ರ‍್ಯಾಲಿ ನಡೆಯಿತು. ವಿವಿಧ ಘೋಷಣೆಗಳನ್ನು ಕೂಗುತ್ತ ಸಾಗಿದ ರ‍್ಯಾಲಿಯ ಬಳಿಕ ಬಹಿರಂಗ ಸಭೆ ಜರುಗಿತು.

ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ನಗರದ ಕರುಣೇಶ್ವರ ನಗರದ ಕೆಪಿಟಿಸಿಎಲ್ ಭವನದಲ್ಲಿ ನಡೆಯುವ ಸಮ್ಮೇಳನವನ್ನು ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಆದರ್ಶ ಎಂ. ಸಾಜಿ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಐಪೆ ಘೋಷ್, ರಾಷ್ಟ್ರೀಯ ಉಪಾಧ್ಯಕ್ಷೆ ಶಿಲ್ಪಾ, ಕೇರಳ ರಾಜ್ಯ ಅಧ್ಯಕ್ಷ ಎಂ. ಶಿವಪ್ರಸಾದ್, ತಮಿಳುನಾಡು ರಾಜ್ಯ ಅಧ್ಯಕ್ಷೆ ಮಿರುಧುಲಾ ಹಾಗೂ ತೆಲಂಗಾಣ ರಾಜ್ಯ ಕಾರ್ಯದರ್ಶಿ ನಾಗರಾಜ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು.

ಸಮ್ಮೇಳನದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಅಂಬ್ಲಿಕಲ್ ಶಿವಪ್ಪ ವಹಿಸಿದ್ದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಪ್ರೊ. ಆರ್.ಕೆ. ಹುಡುಗಿ, ಅಧ್ಯಕ್ಷ ಆರ್.ಜಿ. ಶೆಟಗಾರ್, ರಾಜ್ಯ ಉಪಾಧ್ಯಕ್ಷರಾದ ಡಾ. ದೊಡ್ಡ ಬಸವರಾಜ ಗುಳೇದಾಳ, ಬಸವರಾಜ ಎಸ್., ಗಣೇಶ ರಾಠೋಡ, ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಇಮಾಮ್ ಸಾಬ್, ಜಿಲ್ಲಾಧ್ಯಕ್ಷೆ ಸುಜಾತ ವೈ., ಜಿಲ್ಲಾ ಸಹಕಾರ್ಯದರ್ಶಿ ತಾಯಣ್ಣ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ ನೀಟ್ ಪರೀಕ್ಷಾ ಅಕ್ರಮ, ಎಸ್‌ಐಆರ್, ಪಠ್ಯಪುಸ್ತಕಗಳಲ್ಲಿನ ಬದಲಾವಣೆ, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ರಕ್ಷಣೆ, ವೈಜ್ಞಾನಿಕ ಮನೋಭಾವ, ಕೋಮು ಸೌಹಾರ್ದತೆ ಹಾಗೂ ಸಂವಿಧಾನದ 371(ಜೆ) ವಿಧಿಯ ಸಮರ್ಪಕ ಜಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಮುಂದಿನ ಹೋರಾಟದ ಕಾರ್ಯತಂತ್ರ ರೂಪಿಸಲಾಗುತ್ತದೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor