ಕಲಬುರಗಿ | ಮಾರ್ಚ್ವರೆಗೆ 2,600 ಉದ್ಯೋಗ ಸೃಜನೆ ಗುರಿ : ಡಿಸಿ ಇಕ್ರಮ್ ಶರೀಫ್
ʼಉದ್ಯೋಗ ನಿಧಿʼ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ
ಕಲಬುರಗಿ: ‘ಉದ್ಯೋಗ ನಿಧಿ’ ಯೋಜನೆಯಡಿ ಹೊಸದಾಗಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಪ್ರತಿ ಅರ್ಹ ಉದ್ಯೋಗಿಗೆ ಮಾಸಿಕ 2,500 ರೂ. ರಂತೆ ಗರಿಷ್ಠ ಎರಡು ವರ್ಷಗಳವರೆಗೆ ಉದ್ಯೋಗ ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು ಜಿಲ್ಲೆಯ ಕೈಗಾರಿಕೆಗಳು ಉದ್ಯೋಗ ನಿಧಿ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕರೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ‘ಉದ್ಯೋಗ ನಿಧಿ’ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾದೇಶಿಕ ಅಸಮಾನತೆ ನಿವಾರಿಸುವ ಉದ್ದೇಶದಿಂದ ಪ್ರೊ. ಎಂ. ಗೋವಿಂದ ರಾವ್ ಸಮಿತಿಯ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರವು ಕಲಬುರಗಿ ಸೇರಿದಂತೆ ಕಡಿಮೆ ಅಭಿವೃದ್ಧಿ ಹೊಂದಿದ 11 ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸಲು ‘ಉದ್ಯೋಗ ನಿಧಿ’ ಯೋಜನೆ ಘೋಷಿಸಿದೆ ಎಂದು ತಿಳಿಸಿದರು.
ಯೋಜನೆಯಡಿ 2027ರ ಮಾರ್ಚ್ವರೆಗೆ ಕಲಬುರಗಿ ಜಿಲ್ಲೆಯಲ್ಲಿ 2,600 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಅರ್ಹ ಉದ್ಯಮಿಗಳು ಮತ್ತು ಕೈಗಾರಿಕಾ ಘಟಕಗಳಿಗೆ, ಹೊಸದಾಗಿ ನೇಮಕಗೊಳ್ಳುವ ಅರ್ಹ ಕಾರ್ಮಿಕರ ಪರವಾಗಿ ಗರಿಷ್ಠ 24 ತಿಂಗಳ ಅವಧಿಗೆ ಮಾಸಿಕ 2,500 ರೂ. ಉದ್ಯೋಗ ಪ್ರೋತ್ಸಾಹಧನ ನೀಡಲಾಗುತ್ತದೆ. ಹೊಸದಾಗಿ ಭವಿಷ್ಯ ನಿಧಿ (ಪಿಎಫ್) ಖಾತೆ ತೆರೆಯುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಈ ಸೌಲಭ್ಯ ಅನ್ವಯವಾಗಲಿದ್ದು, ಫಲಾನುಭವಿ ಕಾರ್ಮಿಕರು ಯೋಜನೆ ವ್ಯಾಪ್ತಿಯ 11 ಜಿಲ್ಲೆಗಳ ನಿವಾಸಿಗಳಾಗಿರಬೇಕು ಎಂದು ಹೇಳಿದರು.
ಯೋಜನೆಯ ಪ್ರಯೋಜನ ಪಡೆಯಲು ಕೈಗಾರಿಕಾ ಘಟಕವು ಉದ್ಯಮ್ ಪೋರ್ಟಲ್ನಲ್ಲಿ ನೋಂದಾಯಿತ ಉತ್ಪಾದನಾ ಅಥವಾ ಸೇವಾ ವಲಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ಆಗಿರಬೇಕು. ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ವೇತನವು ಸಂಬಂಧಿತ ವಲಯಕ್ಕೆ ನಿಗದಿಪಡಿಸಿರುವ ಕನಿಷ್ಠ ವೇತನಕ್ಕಿಂತ ಹೆಚ್ಚಿರಬೇಕು. 2026ರ ಸೆಪ್ಟೆಂಬರ್ 11ರಂದು ಯೋಜನೆ ಜಾರಿಗೆ ಬಂದ ನಂತರ ಹಾಲಿ ಇರುವ ಹಾಗೂ ಹೊಸದಾಗಿ ಆರಂಭವಾಗುವ ಉದ್ಯಮಗಳು ಸೃಷ್ಟಿಸುವ ಹೊಸ ಮತ್ತು ಹೆಚ್ಚುವರಿ ಉದ್ಯೋಗಗಳಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಯ ಎಂಎಸ್ಎಂಇಗಳು ಹಾಗೂ ಅರ್ಹ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಪ್ರಯೋಜನ ಪಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹಾಗೂ ಉದ್ಯೋಗ ನಿಧಿ ಸಮಿತಿಯ ಸದಸ್ಯ ಕಾರ್ಯದರ್ಶಿ ಅಬ್ದುಲ್ ಅಜೀಮ್, ಅಧಿಕಾರಿಗಳಾದ ರುಪಾಲಿ, ನಳಿನಿ ಮತ್ತು ಜಾಫರ್ ಅನ್ಸಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.