ಕಲಬುರಗಿ : ದೇಶದಲ್ಲಿ ಮೊದಲ ಬಾರಿಗೆ ಆರಂಭವಾಗುತ್ತಿರುವ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಬೆಂಗಳೂರು–ಮುಂಬೈ ನಡುವೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನ ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಕನ್ನಡಿಗರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ತಿಳಿಸಿದರು.

ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಆಗಮಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸ್ವಾಗತ ಸಮಾರಂಭದ ಪೂರ್ವಭಾವಿ ಸಿದ್ಧತೆ ಕುರಿತು ಸೋಲಾಪುರ ವಿಭಾಗದ ಉನ್ನತ ಅಧಿಕಾರಿಗಳೊಂದಿಗೆ ಶುಕ್ರವಾರ (ಅ. 30) ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದಲ್ಲಿ ಇದೇ ಮೊದಲ ಬಾರಿಗೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭವಾಗುತ್ತಿದೆ. ಪ್ರಧಾನಿಯವರು ಒಂದು ರೈಲನ್ನು ವಾರಾಣಸಿಗೆ ಹಾಗೂ ಮತ್ತೊಂದನ್ನು ಬೆಂಗಳೂರು–ಮುಂಬೈ ನಡುವೆ ಆರಂಭಿಸುತ್ತಿರುವುದು ರೈಲ್ವೆ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಕರ್ನಾಟಕದ ಜನತೆಗೆ ರಾಜ್ಯೋತ್ಸವ ಹಾಗೂ ದೀಪಾವಳಿ ಉಡುಗೊರೆಯಾಗಿ ಪ್ರಧಾನಿ ಮತ್ತು ರೈಲ್ವೆ ಇಲಾಖೆ ಈ ಕೊಡುಗೆ ನೀಡಿವೆ. ನವೆಂಬರ್ 1ರಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಡುವ ಉದ್ಘಾಟನಾ ರೈಲು ಸಂಜೆ 6.30ಕ್ಕೆ ಕಲಬುರಗಿಗೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಸಂಭ್ರಮದ ಸ್ವಾಗತ ಸಮಾರಂಭ ಆಯೋಜಿಸಲು ಸೋಲಾಪುರ ವಿಭಾಗೀಯ ರೈಲ್ವೆ ವಲಯ ಪೂರ್ವಸಿದ್ಧತೆ ಮಾಡಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರು ಹಬ್ಬದಂತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಜಾಧವ್ ಮನವಿ ಮಾಡಿದರು.

ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ವಂದೇ ಭಾರತ್ ಸ್ಲೀಪರ್ ಕೋಚ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಹಿರಿಯ ನಾಗರಿಕರಿಗೂ ಮೇಲಿನ ಬರ್ತ್‌ಗೆ ಏರಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೈಗೆಟಕುವ ದರದಲ್ಲಿ ಪ್ರಯಾಣಿಸಲು ಅವಕಾಶವಿದ್ದು, ವಂದೇ ಭಾರತ್ ರೈಲು ಪ್ರಯಾಣವು ವಿಮಾನ ಪ್ರಯಾಣದ ಅನುಭವ ನೀಡಲಿದೆ. ಉದ್ಯೋಗ, ವ್ಯವಹಾರ ಹಾಗೂ ವಿದೇಶ ಪ್ರಯಾಣಕ್ಕಾಗಿ ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಇದು ಅತ್ಯಂತ ಅನುಕೂಲಕರವಾಗಲಿದೆ ಎಂದರು.

‘ಡಕೋಟಾ’ ಎಂದು ಮೂದಲಿಸಿದವರಿಗೆ ತಕ್ಕ ಪಾಠ :

ಕಲಬುರಗಿ–ಬೆಂಗಳೂರು ನಡುವೆ ಕೇಂದ್ರ ರೈಲ್ವೆ ಇಲಾಖೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದಾಗ ಅದನ್ನು ‘ಡಕೋಟಾ ಎಕ್ಸ್‌ಪ್ರೆಸ್’ ಎಂದು ಮೂದಲಿಸಿದವರು, ಇದೀಗ ಆರಂಭವಾಗುತ್ತಿರುವ ವಂದೇ ಭಾರತ್ ಸ್ಲೀಪರ್ ರೈಲನ್ನೂ ಡಕೋಟಾ ಎಂದು ಬಣ್ಣಿಸುವರೇ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜಾಧವ್ ಟಾಂಗ್ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಕೆಲವರು ತಮ್ಮ ಅಸಹನೆಯನ್ನು ಹೊರಹಾಕುತ್ತಿದ್ದಾರೆ ಎಂದು ಹೇಳಿದರು.

ಪೂರ್ವಸಿದ್ಧತಾ ಸಭೆಯಲ್ಲಿ ಸೋಲಾಪುರ ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಜಯದೀಪ್ ಪ್ರದಕ್ಷಿಣ್, ವಾಣಿಜ್ಯ ವಿಭಾಗದ ಅತುಲ್ ಲೋಕರೆ, ಕಲಬುರಗಿ ವಿಭಾಗದ ಸಹಾಯಕ ಎಂಜಿನಿಯರ್ ಶಿವಕುಮಾರ್, ಕಲಬುರಗಿ ರೈಲು ನಿಲ್ದಾಣದ ವ್ಯವಸ್ಥಾಪಕ ಜಿ.ಜಿ. ಮೋನ್, ಹರ್ಷಾನಂದ ಗುತ್ತೇದಾರ್, ಅರುಣ್ ಪವಾರ್, ರಾಮಚಂದ್ರ ಜಾಧವ್ ಮತ್ತಿತರರು ಉಪಸ್ಥಿತರಿದ್ದರು.

ಸಮಯ ಬದಲಾವಣೆಗೆ ಮನವಿ :

ನವೆಂಬರ್ 1ರಂದು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಉದ್ಘಾಟನಾ ರೈಲು ಹೊರಟು ಮರುದಿನ ಮುಂಬೈ ತಲುಪಲಿದೆ. ಉದ್ಘಾಟನಾ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ತಾವು ಕೂಡ ಪಾಲ್ಗೊಳ್ಳಲಿರುವುದಾಗಿ ಜಾಧವ್ ತಿಳಿಸಿದರು.

ವಂದೇ ಭಾರತ್ ರೈಲು ರಾತ್ರಿ 8 ಗಂಟೆಯ ಬದಲಿಗೆ 10 ಗಂಟೆಗೆ ಬೆಂಗಳೂರಿನಿಂದ ಹೊರಟರೆ ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಕುರಿತು ತಾವು ಹಾಗೂ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಅವರು ರೈಲ್ವೆ ಇಲಾಖೆಗೆ ಖುದ್ದಾಗಿ ಮನವಿ ಸಲ್ಲಿಸಿದ್ದು, ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಜಾಧವ್ ತಿಳಿಸಿದರು.

ವಂದೇ ಭಾರತ್ ಸ್ಲೀಪರ್ ರೈಲಿನ ವೇಳಾಪಟ್ಟಿ :

ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 7.45ಕ್ಕೆ ಹೊರಡುವ ರೈಲು, ರಾತ್ರಿ 10.10ಕ್ಕೆ ಧರ್ಮಾವರಂ, 10.30ಕ್ಕೆ ಅನಂತಪುರ, 11.20ಕ್ಕೆ ಗುಂತಕಲ್, ಮಧ್ಯರಾತ್ರಿ 1.03ಕ್ಕೆ ರಾಯಚೂರು, 1.45ಕ್ಕೆ ಯಾದಗಿರಿ, 2.50ಕ್ಕೆ ವಾಡಿ, 3.10ಕ್ಕೆ ಕಲಬುರಗಿ, 4.20ಕ್ಕೆ ಸೋಲಾಪುರ, ಬೆಳಗ್ಗೆ 8ಕ್ಕೆ ಪುಣೆ, 10.45ಕ್ಕೆ ಕಲ್ಯಾಣ್ ಹಾಗೂ 11.55ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ತಲುಪಲಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‌ನಿಂದ ರಾತ್ರಿ 8.10ಕ್ಕೆ ಹೊರಡುವ ರೈಲು, 8.50ಕ್ಕೆ ಕಲ್ಯಾಣ್, 11.45ಕ್ಕೆ ಪುಣೆ, ಮಧ್ಯರಾತ್ರಿ 3.05ಕ್ಕೆ ಸೋಲಾಪುರ, ಬೆಳಗ್ಗೆ 4.15ಕ್ಕೆ ಕಲಬುರಗಿ, 5.05ಕ್ಕೆ ವಾಡಿ, 5.10ಕ್ಕೆ ಯಾದಗಿರಿ, 6.05ಕ್ಕೆ ರಾಯಚೂರು, 7.35ಕ್ಕೆ ಗುಂತಕಲ್, 8.40ಕ್ಕೆ ಅನಂತಪುರ, 9.40ಕ್ಕೆ ಧರ್ಮಾವರಂ ಮೂಲಕ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.

ಅನಂತಪುರ, ಗುಂತಕಲ್, ರಾಯಚೂರು, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ ಹಾಗೂ ಕಲ್ಯಾಣ್ ನಿಲ್ದಾಣಗಳಲ್ಲಿ ಮಾತ್ರ ರೈಲು ನಿಲುಗಡೆಯಾಗಲಿದೆ. ಬೆಂಗಳೂರಿನಿಂದ ಸೋಮವಾರ ಹಾಗೂ ಮುಂಬೈನಿಂದ ಮಂಗಳವಾರ ರೈಲು ಸಂಚಾರ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor