×
Ad

ಕಾಳಗಿಯಲ್ಲಿ ಕಾರಹುಣ್ಣಿಮೆ ಸಂಭ್ರಮ

Update: 2026-06-29 21:44 IST

ಕಾಳಗಿ : ರಟಕಲ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾರಹುಣ್ಣಿಮೆ ಹಬ್ಬವನ್ನು ರೈತರು ಸಂಭ್ರಮದಿಂದ ಆಚರಿಸಿದರು. ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರಹುಣ್ಣಿಮೆ ಅಂಗವಾಗಿ ಕೃಷಿ ಕಾರ್ಯದ ಜತೆಗಾರರಾದ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ಅಲಂಕಾರ ಮಾಡಿ ನೈವೇದ್ಯ ಅರ್ಪಿಸಲಾಯಿತು.

ಬೆಳಗ್ಗೆಯೇ ರೈತರು ತಮ್ಮ ಎತ್ತುಗಳನ್ನು ನದಿಯಲ್ಲಿ ಸ್ನಾನ ಮಾಡಿಸಿ, ವಿಧವಿಧವಾದ ಬಣ್ಣಗಳಿಂದ ಅಲಂಕರಿಸಿದರು. ಎತ್ತುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ಹಣೆಗೆ ಬಾಸಿಂಗ ಕಟ್ಟುವುದರ ಜೊತೆಗೆ ಕೊರಳಿಗೆ ಗಂಟೆ ಮತ್ತು ಹೂಮಾಲೆಗಳನ್ನು ಧರಿಸಿ ಸಿಂಗರಿಸಲಾಯಿತು.

ಗ್ರಾಮದ ಅಗಸಿಯಲ್ಲಿ ಸುಭಾಷ ಪಾಟೀಲ ಹಿರೇಗೌಡರ ನೇತೃತ್ವದಲ್ಲಿ ರೈತರು ಕರಿ ಹರಿದು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಬಳಿಕ ಬಸವಣ್ಣನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಮನೆಗಳಲ್ಲಿ ಹೋಳಿಗೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಿ ಹಬ್ಬದ ಊಟ ಸವಿದರು.

ಹಿರೇಗೌಡರ ಮನೆಯಿಂದ ಅಲಂಕೃತ ಎತ್ತುಗಳು ಹಾಗೂ ಟ್ರಾಕ್ಟರ್‌ಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಊರ ಅಗಸಿವರೆಗೆ ತೆರಳಿ ಕರಿ ಹರಿಸುವ ಮೂಲಕ ಕಾರಹುಣ್ಣಿಮೆ ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ, ಸುಬ್ಬಣ್ಣ ಸಿಗಿ, ಚಂದ್ರಕಾಂತ್ ಚಿಕ್ಕಗಿಸಿ, ಜಗ್ಗು ಚಿಕ್ಕಅಗಿಸಿ, ಶಿವಕುಮಾರ್ ವಳಕಿಂಡಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News