Kalaburagi | ಎಸ್‌ಐಆರ್ ಪ್ರಕ್ರಿಯೆಗೆ ಸಾರ್ವಜನಿಕರ ಸಹಕಾರ ಅಗತ್ಯ: ರಾಹುಲ್ ಎಸ್. ಸಂಕನೂರ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಬೈಕ್ ಜಾಗೃತಿ ರ‍್ಯಾಲಿಗೆ ಚಾಲನೆ
ಕಲಬುರಗಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಮನೆ-ಮನೆಗೆ ಭೇಟಿ ನೀಡುವ ಅಧಿಕಾರಿಗಳಿಗೆ ಸಾರ್ವಜನಿಕರು ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಸಹಕರಿಸಬೇಕು. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಪ್ರಜಾಪ್ರಭುತ್ವದ ಈ ಮಹತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ (SVEEP) ಸಮಿತಿ ಅಧ್ಯಕ್ಷ ರಾಹುಲ್ ಎಸ್. ಸಂಕನೂರ ಮನವಿ ಮಾಡಿದರು.
ನಗರದ ಜಗತ್ ವೃತ್ತದಲ್ಲಿ ಭಾರತ ಚುನಾವಣಾ ಆಯೋಗ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಕುರಿತ ಬೈಕ್ ಜಾಗೃತಿ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತಗಟ್ಟೆಗಳ ಮ್ಯಾಪಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಪ್ರಸ್ತುತ ಮೂರನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ಹಾಗೂ ಘೋಷಣಾ ಪತ್ರ ವಿತರಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.
ಊರಿನ ಹೊರಗಿರುವ ಮತದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತಿದ್ದು, ಈ ಕಾರ್ಯದಲ್ಲಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 30ರಿಂದ ಜುಲೈ 29ರವರೆಗೆ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ನಡೆಯಲಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಖಚಿತಪಡಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ. ದೋಷರಹಿತ ಮತದಾರರ ಪಟ್ಟಿಯು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಆದ್ದರಿಂದ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಲ್ಲರೂ ಜಾಗರೂಕರಾಗಬೇಕು ಎಂದು ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ (ಕಾಲೇಜು ಶಿಕ್ಷಣ ಇಲಾಖೆ), ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಬೈಕ್ ಜಾಗೃತಿ ರ‍್ಯಾಲಿಯು ಜಗತ್ ವೃತ್ತದಿಂದ ಆರಂಭವಾಗಿ ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಬಂಕ್, ತಿಮ್ಮಾಪುರ ವೃತ್ತ ಮಾರ್ಗವಾಗಿ ಮತ್ತೆ ಜಗತ್ ವೃತ್ತದಲ್ಲಿ ಸಮಾಪ್ತಿಯಾಯಿತು.
ರ‍್ಯಾಲಿಯ ಮೂಲಕ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೇವಪ್ಪ, ಸಹಾಯಕ ಕಾರ್ಯದರ್ಶಿ ಚೆನ್ನಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾನಪ್ಪ ಕಟ್ಟಿಮನಿ, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು, ಬಿಎಲ್‌ಒಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗವಿಕಲರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.