×
Ad

ಕಾಳಗಿ | ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

Update: 2026-06-29 21:42 IST

ಕಾಳಗಿ, ಜೂ.30: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿರುವ ದೇಣಿಗೆ ಮತ್ತು ಕಾಣಿಕೆಗಳ ದುರುಪಯೋಗ ಕುರಿತು ಕೇಳಿಬಂದಿರುವ ಆರೋಪಗಳು ಭಕ್ತರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ್ ಗುತ್ತೇದಾರ ಆಗ್ರಹಿಸಿದರು.

ಪಟ್ಟಣದ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಸಮಾನ ಮನಸ್ಕರ ಗೆಳೆಯರ ಬಳಗದ ವತಿಯಿಂದ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳ ಹೋರಾಟದ ಬಳಿಕ ನಿರ್ಮಾಣಗೊಂಡ ಶ್ರೀರಾಮ ಮಂದಿರವು ಕೋಟ್ಯಂತರ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ದೇಣಿಗೆ ಮತ್ತು ಕಾಣಿಕೆಗಳ ಲೆಕ್ಕಪತ್ರಗಳಲ್ಲಿ ಅವ್ಯವಸ್ಥೆ ನಡೆದಿದೆ ಎಂಬ ಆರೋಪಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ ಎಂದು ಹೇಳಿದರು.

ಭಕ್ತರು ಸಮರ್ಪಿಸಿರುವ ದೇಣಿಗೆ, ಚಿನ್ನಾಭರಣ, ಬೆಳ್ಳಿಯ ಇಟ್ಟಿಗೆ ಸೇರಿದಂತೆ ಅಮೂಲ್ಯ ವಸ್ತುಗಳ ಕುರಿತು ಸಮರ್ಪಕ ದಾಖಲೆ ಮತ್ತು ಲೆಕ್ಕಪತ್ರ ನಿರ್ವಹಣೆ ಅಗತ್ಯವಿದೆ. ಪ್ರಕರಣದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ರಾಮ ಮಂದಿರದ ದೇಣಿಗೆ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ ಭಕ್ತರ ನಂಬಿಕೆಗೆ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ಹನುಮಂತಪ್ಪ ಕಾಂತಿ ಹಾಗೂ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಭೀಮರಾಯ ಮಲಘಾಣ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಂಚಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ರಾಘವೇಂದ್ರ ಗುತ್ತೇದಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ಉದ್ಯಮಿ ವಿಶ್ವನಾಥ ವನಮಾಲಿ, ಪಪಂ ಸದಸ್ಯ ಶರಣಪ್ಪ ಬೆಲೂರ, ಗುರುರಾಜ ಮದ್ದೂರು, ಬಸವರಾಜ ಮಡಿವಾಳ, ಪ್ರದೀಪ ಡೊಣ್ಣೂರ, ಶರಣು ಮಜ್ಜಿಗೆ, ಪರಮೇಶ್ವರ ಮಡಿವಾಳ, ದತ್ತು ಗುತ್ತೇದಾರ, ಅವಿನಾಶ್ ಕೊಡದೂರ, ಕೃಷ್ಣ ಸಿಂಗಶೆಟ್ಟಿ, ಬಂಡು ಗದ್ದಿ, ಸಂತೋಷ ಪತಂಗೆ, ಮುನೀರಬೇಗ ಬಿಜಾಪುರ, ಸಂತೋಷ ಕಡಬೂರ, ಸಂಗಮೇಶ ಬಡಿಗೇರ, ಅಸ್ಲಾಂಬೇಗ ಬಿಜಾಪುರ ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News