×
Ad

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಸದನದಲ್ಲಿ ಶಾಸಕ ಬಿ.ಆರ್.ಪಾಟೀಲ್ ಆಗ್ರಹ

Update: 2025-12-12 20:46 IST

ಬೆಳಗಾವಿ(ಡಿ.12): ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಅವರು ಸದನದಲ್ಲಿ ಮನವಿ ಮಾಡಿದರು.

ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಬಿ.ಆರ್.ಪಾಟೀಲ್, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ರಚಿಸುವ ಸಚಿವಾಲಯದ ಕಚೇರಿಯನ್ನು ಬೆಂಗಳೂರಿನ ಬದಲಾಗಿ ಕಲಬುರಗಿಯಲ್ಲಿ ಸ್ಥಾಪಿಸಬೇಕು. ಇದರಿಂದಾಗಿ, ಈ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜ್ಯ ಸರಕಾರ ಪ್ರತಿ ಲೀಟರ್ ಹಾಲಿಗೆ 5 ರೂ.ಪ್ರೋತ್ಸಾಹ ಧನ ನೀಡುತ್ತಿದೆ. ಕಲಬುರಗಿಯಲ್ಲಿ ಹೈನುಗಾರಿಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದಾಗಿ, ಈ ಭಾಗದಲ್ಲಿನ ರೈತರು, ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ. ಹಾಗೆಯೇ, ಕುರಿ, ಕೋಳಿ ಸಾಕಾಣಿಕೆ ಮಾಡಲು ಅಗತ್ಯ ಸಾಲ ಸೌಲಭ್ಯ ಸಿಗುವಂತಾಗಬೇಕು ಎಂದು ಬಿ.ಆರ್.ಪಾಟೀಲ್ ಹೇಳಿದರು.

ಬಡತನ ನಿವಾರಣೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆ ತರಲು ಜನರನ್ನು ಭಾಗಿದಾರರನ್ನಾಗಿಸಬೇಕು. ಕಲಬುರಗಿಯಲ್ಲಿ ಅರಣ್ಯೀಕರಣ ಕೇವಲ ಶೇ.6ರಷ್ಟು ಇದೆ. ತಾಪಮಾನ 44 ಡಿಗ್ರಿಗೆ ತಲುಪುತ್ತಿದೆ. ದೊಡ್ಡ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು ಅರಣ್ಯೀಕರಣ ಮಾಡುವತ್ತ ಗಮನಹರಿಸಬೇಕಿದೆ ಎಂದು ಹೇಳಿದರು.  

ಸರಕಾರದಿಂದ ಯಾವುದೇ ನೆರವು ಪಡೆಯದೆ ಮರಗಳನ್ನು ಬೆಳೆಸಿ ಜನಸಾಮಾನ್ಯರ ಮನಸ್ಸಿನಲ್ಲಿ ಅಜರಾಮರವಾಗಿರುವ ಸಾಲುಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು. ರಾಜ್ಯದ ಪ್ರತಿಯೊಂದು ಮನೆಯಲ್ಲಿ ಸಾಲುಮರದ ತಿಮ್ಮಕ್ಕ ಅವರಂತಹ ಪರಿಸರ ಪ್ರೇಮಿಗಳು ಹೊರ ಬರಬೇಕಿದೆ ಎಂದು ಬಿ.ಆರ್.ಪಾಟೀಲ್ ಹೇಳಿದರು.  

ಕರ್ನಾಟಕದಲ್ಲಿ ಮಾನವ ನಿರ್ಮಿತ ಅರಣ್ಯ ಸಂಪತ್ತು ಹೇರಳವಾಗಿದೆ. ಜಮೀನುಗಳ ವಿಸ್ತೀರ್ಣದ ಆಧಾರದ ಮೇಲೆ ಇಂತಿಷ್ಟು ಮರಗಳು ಇರಲೇಬೇಕು ಎಂಬ ನಿಯಮಗಳನ್ನು ರೂಪಿಸಬೇಕು. ಆಗ ಸಸ್ಯ ಸಂಪತ್ತನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಬಿ.ಆರ್.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News