ಚಿತಾಪುರಕ್ಕೆ ವಿಭಾಗೀಯ ಕಚೇರಿ ಸ್ಥಳಾಂತರ ಬೇಡ: ಜೇವರ್ಗಿ ವಿದ್ಯುತ್ ಗುತ್ತಿಗೆದಾರರ ಸಂಘ ಆಗ್ರಹ
ಜೇವರ್ಗಿ: ಕಲಬುರಗಿ ಜಿಲ್ಲೆಯ ಚಿತಾಪುರ ತಾಲೂಕಿಗೆ ವಿಭಾಗೀಯ ಕಚೇರಿಯನ್ನು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ತಕ್ಷಣವೇ ತಡೆಹಿಡಿದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಕಚೇರಿಯನ್ನು ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಜೇವರ್ಗಿ ತಾಲೂಕು ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರಫೀಕ್ ಜಮಾದಾರ್ ಪ್ರಕಟಣೆ ಹೊರಡಿಸಿದ್ದು, ಗಡಿನಾಡು ಮತ್ತು ಪ್ರಾದೇಶಿಕ ವಿಭಾಗ–2 ಕಲಬುರಗಿಯನ್ನು ವಿಭಜಿಸಿ ಹೊಸದಾಗಿ ಕಲ್ಯಾಣ ಕರ್ನಾಟಕ ವಿಭಾಗ ರಚಿಸುವ ಹಿನ್ನೆಲೆಯಲ್ಲಿ, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಭಾಗೀಯ ಕಚೇರಿಯನ್ನು ಚಿತಾಪುರಕ್ಕೆ ಸ್ಥಳಾಂತರಿಸಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಚಿತಾಪುರ ತಾಲೂಕಿನಲ್ಲಿ ಇಲಾಖೆಯ ಕಾಮಗಾರಿಗಳ ಸಂಖ್ಯೆ ಅತಿ ಕಡಿಮೆಯಿದ್ದು, ಕಲಬುರಗಿಯಿಂದ ಚಿತಾಪುರಕ್ಕೆ ಸುಮಾರು 100 ರಿಂದ 120 ಕಿಲೋಮೀಟರ್ ದೂರವಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಕಚೇರಿ ಸಂಬಂಧಿತ ಕಾರ್ಯಗಳಿಗಾಗಿ ದೂರದ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಚೇರಿ ಸ್ಥಳಾಂತರದಿಂದ ಸಾರ್ವಜನಿಕರ ಸಮಯ ಹಾಗೂ ಹಣದ ಅನಗತ್ಯ ವ್ಯಯವಾಗುವುದರ ಜೊತೆಗೆ ಆಡಳಿತಾತ್ಮಕ ಕಾರ್ಯನಿರ್ವಹಣೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರ ಹಾಗೂ ಗುತ್ತಿಗೆದಾರರ ಹಿತದೃಷ್ಟಿಯಿಂದ ಚಿತಾಪುರ ತಾಲೂಕಿನಲ್ಲಿ ವಿಭಾಗೀಯ ಕಚೇರಿಯನ್ನು ಮಂಜೂರು ಮಾಡುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಈಗಿರುವ ಸ್ಥಳದಲ್ಲಿಯೇ ಕಚೇರಿಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.