ಕೇಂದ್ರ ಬಜೆಟ್ 2026 | ಮೇಲಿಂದ ಮೇಲೆ ರಾಜ್ಯಕ್ಕೆ ಅನ್ಯಾಯ : ಸಚಿವ ಡಾ.ಶರಣಪ್ರಕಾಶ ಪಾಟೀಲ
ಸೇಡಂ: ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೆ ಮೇಲಿಂದ ಮೇಲೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಬಜೆಟ್ ವಿಚಾರದಲ್ಲೂ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವುದು ಖಂಡನೀಯ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರು, ಕಾರ್ಮಿಕರು ಹಾಗೂ ಯುವಜನತೆಗೆ ನೆರವಾಗುವ ಯಾವುದೇ ಅಂಶವೂ ಇಲ್ಲದಿರುವುದನ್ನು ಖಂಡಿಸಿದ್ದಾರೆ. ಅವಶ್ಯಕ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಆದಾಯ ಅಸಮಾನತೆ ಎಂಬ ಮೂಲಭೂತ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರಗಳಿಲ್ಲ. ಜೊತೆಗೆ ರಾಜ್ಯದ ಹಿತಕಾಪಾಡುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಅತ್ಯಧಿಕ ಸಂಪನ್ಮೂಲಗಳಿದ್ದು, ಅವುಗಳ ಸಮರ್ಪಕ ಬಳಕೆ ಮಾಡಿಕೊಂಡು ಅಭಿವೃದ್ಧಿಶೀಲತೆಯನ್ನು ಪುನಶ್ಚೇತನದ ಮಾರ್ಗದಲ್ಲಿ ನಡೆಸಬಹುದಾದರೂ, ಕೇಂದ್ರ ಸರ್ಕಾರ ಕರ್ನಾಟಕದ ಕೈಗಾರಿಕೆಗಳು ಮತ್ತು ಆರ್ಥಿಕ ಸ್ವಾವಲಂಬನೆಗೆ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರೀಕ್ಷೆಯಂತೆ ಹೆಚ್ಚಿನ ಒತ್ತು ಕಾರ್ಪೊರೇಟ್‌ಗಳಿಗೆ ನೀಡಲಾಗಿದ್ದು, ದೇಶದ ಅಸ್ಮಿತೆಯಂತಿರುವ ಹಿಂದುಳಿದ, ದೀನ ದಲಿತ ಹಾಗೂ ಕೂಲಿ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರ ತನ್ನ ಬಜೆಟ್‌ನ್ನು ಉಳ್ಳವರ ಪರವಾಗಿ ಘೋಷಿಸಿರುವುದು ದುರಂತವೇ ಸರಿ.ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ ಮತ್ತು ಗ್ರಾಮೀಣ ಅಭಿವೃದ್ಧಿಗೆ ನೀಡಬೇಕಾದ ಅನುದಾನವನ್ನು ಕಡಿತಗೊಳಿಸಲಾಗಿದೆ. ಬಹಳಷ್ಟು ಪ್ರಚಾರ ಮಾಡಲಾದ ವಿಬಿ ಜಿ ರಾಮ್ ಜಿ ಯೋಜನೆಗೆ ಕೇವಲ 96,000 ಕೋಟಿ ಅನುದಾನ ನಿಗದಿಗೊಳಿಸಲಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಅನ್ಯಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.