×
Ad

ಕಲಬುರಗಿ| "ದ.ರಾ.ಬೇಂದ್ರೆ ಬದುಕು ಮತ್ತು ಸಾಹಿತ್ಯ" ಕುರಿತ ಸಂವಾದ

Update: 2026-02-01 22:56 IST

ಕಲಬುರಗಿ: ಬ್ರಿಟಿಷರ ಮಾನವ ಹತ್ಯೆ ಖಂಡಿಸಿ ಬರೆದ "ನರಬಲಿ" ಕವಿತೆ ಬೇಂದ್ರೆ ಅಜ್ಜನ ಬಂಧನಕ್ಕೆ ಕಾರಣವಾಯಿತು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶೈಲಜಾ ಕೊಪ್ಪರ್ ಹೇಳಿದರು.

ರವಿವಾರ ನಗರದ ಕನ್ನಡ ಭವನದ ಕಲಾ ಭವನದಲ್ಲಿ ಪ್ರೋಗ್ರೆಸಿವ್ ಕಲ್ಚರ್ ಅಸೋಸಿಯೇಷನ್ ಆಫ್ ಇಂಡಿಯಾ (ಪಿಸಿಎಐ) ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಶಬ್ದ ಗಾರುಡಿಗ "ದ.ರಾ.ಬೇಂದ್ರೆ ಬದುಕು ಮತ್ತು ಸಾಹಿತ್ಯ" ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯರನ್ನು ತುಳಿದು ಆಡಳಿತ ನಡೆಸುತ್ತಿದ್ದ ಬಿಳಿಯರ ವಿರುದ್ಧ ಕೆಂಡ ಕಾರಿದ್ದ ಈ ಕವಿತೆ ಭಾರತೀಯರನ್ನು ಬಡಿದೆಚ್ಚರಿಸುವ ಸಾಮರ್ಥ್ಯ ಹೊಂದಿತ್ತು. ಜನರು ಹೋರಾಟಕ್ಕೆ ಸಿಡಿದೇಳುವ ಆತಂಕ ಕಾಡಿದ್ದರಿಂದ ಬ್ರಿಟಿಷ್ ಸರಕಾರ ಬೇಂದ್ರೆಯವರನ್ನು ಬಂಧಿಸಿ ಜೈಲಿಗಟ್ಟಿತ್ತು. ಹತ್ತು ವರ್ಷಗಳ ಕಾಲ ಜೈಲಲ್ಲಿಟ್ಟು ಶಿಕ್ಷೆ ನೀಡಿತು. ಮೇಲಾಗಿ ಇವರಿಗೆ ಯಾವುದು ನೌಕರಿಗೆ ಸೇರಿಸಿಕೊಳ್ಳದಂತೆ ಆದೇಶ ಹೊರಡಿಸಿತು. ಇದರಿಂದ ಬೇಂದ್ರೆ ಕುಟುಂಬ ಆರ್ಥಿಕ ಸಂಕಟಕ್ಕೊಳಗಾಗಿ ಕ್ರೂರ ಬಡತನವನ್ನು ಅನುಭವಿಸಬೇಕಾಯಿತು. ನರಬಲಿ ಕವಿತೆಯಿಂದ ವರಕವಿ ದೊಡ್ಡ ಬೆಲೆ ತೆತ್ತಬೇಕಾಯಿತು ಎಂದರು.

ಕುರುಡು ಕಾಂಚಾಣ ಕುಣಿಯುತ್ತಿತ್ತು.. ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು.. ಎಂದು ಬರೆಯುವ ಮೂಲಕ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಬೇಂದ್ರೆ ಸಾಹಿತ್ಯ ಕ್ರಾಂತಿ ಮುಂದುವರೆಯಿತು. ಇಬ್ಬನಿಯ ಹನಿಗಳನ್ನು ಅಮೃತದ ಹನಿಗಳಿಗೆ ಹೋಲಿಸಿ, ಗಿಡಗಂಟೆಗಳ ಕೊರಳಿಂದ ಹಕ್ಕಿಗಳ ಹಾಡು ಹೊರಟಿದೆ ನೋಡಿ ಎಂದು ಬರೆದು ಭಾವ ಕವಿ ಎನ್ನಿಸಿದರು. ಆದರೆ ಇಂದಿನ ಯಾಂತ್ರಿಕ ಜೀವನದಲ್ಲಿ ಉನ್ನತಿ ಮರೆಯಾಗುತ್ತಿದೆ. ಭಾವ ಕವಿ ಜೀವಪರ ಕವಿಯಾಗಿ ಜನಮನ ಗೆದ್ದಿದ್ದಾರೆ. "ನೀ ಹೀಂಗ ನೋಡಬ್ಯಾಡ ನನ್ನ..." ಕವಿತೆ ಎಲ್ಲಿಯವರೆಗೂ ಜನರ ಕೊರಳ ಹಾಡಾಗಿರುತ್ತದೋ ಅಲ್ಲಿವರೆಗೆ ಬೇಂದ್ರೆ ಬದುಕಿರುತ್ತಾರೆ ಎಂದು ವಿವರಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ವೆಂಕಣ್ಣ ಡೊಣ್ಣೆಗೌಡರ್ ಮಾತನಾಡಿ, ಕಾವ್ಯ ಲೋಕದಲ್ಲಿ ತಮ್ಮದೇಯಾದ ಭಾವ ಸಾಹಿತ್ಯ ಕಟ್ಟಿಕೊಟ್ಟ ಬೇಂದ್ರೆ ಅವರು ಬದುಕಿನ ಕಷ್ಟಗಳಿಂದ ಬೆಂದು ಹೋಗಿದ್ದರು. ಜಾತಿಯನ್ನು ಮೀರಿ ಜನರನ್ನು ಪ್ರೀತಿಸುವ ಜನಪರ ಕವಿಯಾಗಿದ್ದರು ಎಂಬುದಕ್ಕೆ ಅವರ ಬದುಕು ಮತ್ತು ಬರಹವೇ ಸಾಕ್ಷಿಯಾಗಿದೆ ಎಂದರು.

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಎ.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಪುಟ್ಟರಾಜ್ ಲಿಂಗಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವಿಶಾಲಾಕ್ಷಿ ದೇಸಾಯಿ, ಮಡಿವಾಳಪ್ಪ ಹೇರೂರ, ಮಹಾದೇವಿ ಬಿ.ಕೆ, ಶೋಬನಾ ಸೇರಿದಂತೆ ನಗರದ ಸಾಹಿತ್ಯಾಸಕ್ತರು, ಸಂಘಟಕರು ಪಾಲ್ಗೊಂಡಿದ್ದರು.

ಆವಿಷ್ಕಾರ ವೇದಿಕೆಯ ಶ್ರೀಶರಣ ಹೊಸಮನಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿಶಾಲಾಕ್ಷಿ ದೇಸಾಯಿ ಹಾಗೂ ಶೋಬನಾ ಬೇಂದ್ರೆ ಸಾಹಿತ್ಯದ ಗೀತೆಗಳನ್ನು ಹಾಡಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News