×
Ad

ಗಡಿನಾಡಿನ ಜನರ ನಿಜವಾದ ಸಾರಥಿಯಾಗಿ ವಾರ್ತಾಭಾರತಿ ಪತ್ರಿಕೆ ಕಾರ್ಯನಿರ್ವಹಿಸಲಿದೆ : ರಮೇಶ್ ಲೋಹಾರ್

ಆಳಂದದಲ್ಲಿ ‘ವಾರ್ತಾಭಾರತಿ’ ಪತ್ರಿಕೆ ಲೋಕಾರ್ಪಣೆ

Update: 2025-12-25 21:51 IST

ಆಳಂದ: ರಾಜ್ಯದ ಗಡಿಭಾಗದ ಆಳಂದ ಪಟ್ಟಣದಲ್ಲಿ ‘ವಾರ್ತಾಭಾರತಿ’ ದಿನಪತ್ರಿಕೆಯ ಲೋಕಾರ್ಪಣೆ ಕಾರ್ಯಕ್ರಮವು ಗುರುವಾರ ನಡೆಯಿತು.

ಕೃಷಿಕ ಸಮಾಜದ ಅಧ್ಯಕ್ಷರು, ಕಾಂಗ್ರೆಸ್ ಯುವ ಮುಖಂಡ ಗುರುಶರಣ ಪಾಟೀಲ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷರು, ಹೋರಾಟಗಾರ ರಮೇಶ್ ಲೋಹಾರ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಪಾತ್ರ, ಸವಾಲುಗಳು ಹಾಗೂ ಭವಿಷ್ಯದ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು.

ಹೋರಾಟಗಾರ ರಮೇಶ್ ಲೋಹಾರ್ ಮಾತನಾಡಿ, ಮಾಧ್ಯಮಗಳು ಸಂವಿಧಾನದ ನಾಲ್ಕನೇ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಲವನ್ನು ನೆನಪಿಸಿದರು. “ಒಂದು ಕಾಲದಲ್ಲಿ ಮಾಧ್ಯಮಗಳು ತಪ್ಪುಗಳನ್ನು ಹುಡುಕಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದವು. ಆದರೆ ಇಂದು ಮಾಧ್ಯಮಗಳು ಆಳುವ ಸರ್ಕಾರದ ಕೈಗೊಂಬೆಯಾಗಿ ಮಾರ್ಪಡುತ್ತಿವೆಯೇ ಎಂಬ ಚರ್ಚೆ ನಡೆಯುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

‘ವಾರ್ತಾಭಾರತಿ’ ನಿರ್ಭಯ ಹಾಗೂ ನಿಷ್ಪಕ್ಷಪಾತವಾಗಿ ಜನಪರ ಮಾಧ್ಯಮವಾಗಿ ಕಾರ್ಯನಿರ್ವಹಿಸಲಿದೆ. ಗಡಿಭಾಗದ ಗ್ರಾಮೀಣ ಸಮಸ್ಯೆಗಳು, ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕೆ ಈ ಪತ್ರಿಕೆ ವಿಶೇಷ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಲೋಕಾರ್ಪಣೆಯ ನಂತರ ಮಾತನಾಡಿದ ಗುರುಶರಣ ಪಾಟೀಲ್, ಮಾಧ್ಯಮಗಳ ಮಹತ್ವವನ್ನು ಒತ್ತಿ ಹೇಳಿದರು. ಅನೇಕ ಹಗರಣಗಳು ಮಾಧ್ಯಮಗಳ ಮೂಲಕವೇ ಬೆಳಕಿಗೆ ಬಂದಿವೆ. ಹೋರಾಟಗಳು ಮತ್ತು ಹೋರಾಟಗಾರರನ್ನು ಜನಸಾಮಾನ್ಯರ ಗಮನಕ್ಕೆ ತಂದದ್ದು ಪತ್ರಿಕೆಗಳೇ. ಶಾಸಕಾಂಗ ಮತ್ತು ಕಾರ್ಯಾಂಗಗಳ ಲೋಪಗಳನ್ನು ಎತ್ತಿ ತೋರಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ” ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ಪತ್ರಕರ್ತರು ಗುರುತಿನ ಚೀಟಿ ದುರುಪಯೋಗಪಡಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ‘ವಾರ್ತಾಭಾರತಿ’ ಇಂತಹ ಪ್ರವೃತ್ತಿಗಳಿಗೆ ತಲೆಬಾಗದ ಸಮಾಜಮುಖಿ ಪತ್ರಿಕೆಯಾಗಿ ಹೊರಹೊಮ್ಮುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು. ಗಡಿನಾಡಿನ ಜನರ ನಿಜವಾದ ಸಾರಥಿಯಾಗಿ ವಾರ್ತಾಭಾರತಿ ಪತ್ರಿಕೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ್, ರಫೀಕ್ ನಾಮ್ದಾರ್, ಡಾ.ಮೋನಪ್ಪ ಸುತಾರ್, ಅಪ್ಪಾಸಾಬ್ ಕಲ್ಯಾಣಿ, ತುಕಾಣಿ ಡಾ.ಅವಿನಾಶ್, ದೇವನೂರು ಜಗದೀಶ್ ಕೋರೆ ಸೇರಿದಂತೆ ಹಲವಾರು ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

ವಾರ್ತಾಭಾರತಿಯ ನಿಯೋಜಿತ ಪತ್ರಕರ್ತ ಮಹೇಶ್ ಸಾಕ್ರೆ ಅವರು ಎಲ್ಲರನ್ನು ಸ್ವಾಗತಿಸಿ, ಪತ್ರಿಕೆಯ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು.

‘ವಾರ್ತಾಭಾರತಿ’ ಪತ್ರಿಕೆಯ ಲೋಕಾರ್ಪಣೆಯು ಆಳಂದ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಧ್ಯಮ ಚರ್ಚೆಗೆ ಹೊಸ ಚೈತನ್ಯ ನೀಡಿದ್ದು, ಗಡಿನಾಡಿನ ಸಮಸ್ಯೆಗಳನ್ನು ಜನರ ಗಮನಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News