ಚಿಂಚೋಳಿ | ಮನಸ್ಮೃತಿಯನ್ನು ದಹಿಸಿ ಪ್ರಗತಿಪರರಿಂದ ಪ್ರತಿಭಟನೆ
ಚಿಂಚೋಳಿ: 1927 ಡಿ.25 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಮನಸ್ಮೃತಿಯನ್ನು ದಹಿಸಿದ ಸ್ಮರಣಾರ್ಥವಾಗಿ ಚಿಂಚೋಳಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಚಿಂತಕರೆಲ್ಲರೂ ಸೇರಿಕೊಂಡು ಸಾಂಕೇತಿಕವಾಗಿ ಮನಸ್ಮೃತಿಯ ನಕಲು ಪ್ರತಿಗಳನ್ನು ದಹಿಸಿದರು.
ಈ ವೇಳೆ ಬಹುಜನ ಸಮಾಜ ಪಕ್ಷದ ಮುಖಂಡ ಗೌತಮ ಬಿ ಬೊಮ್ಮನಹಳ್ಳಿ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತ ದೇಶಕ್ಕೆ ಸಂವಿಧಾನವನ್ನು ರಚಿಸುವುದಕ್ಕಿಂತ ಮುಂಚೆ ಜಾರಿಯಲ್ಲಿದ್ದ ಮನುಸ್ಮೃತಿಯು ಹಲವಾರು ಉಚ್ಚ ನೀಚ ಪದ್ಧತಿಗಳನ್ನು ಒಳಗೊಂಡಿತ್ತು. ಮನುಸ್ಮೃತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಮಹಿಳೆಯರ ಸ್ಥಿತಿ ಬಹು ಶೋಚನೀಯವಾಗಿತ್ತು. ಈ ಹಿಂದೆ ಭಾರತದಲ್ಲಿ ಗಂಡ ಸತ್ತ ನಂತರ ಅವನ ಚಿತೆಯಲ್ಲಿಯೇ ಅವನ ಹೆಂಡತಿಯನ್ನು ಸಹ ಜೀವಂತವಾಗಿ ಸುಡುವಂತಹ ಪರಿಸ್ಥಿತಿ ಜೀವಂತವಾಗಿತ್ತು. ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಯಾರಿಗೂ ಕಾಣದೆ, ಅಭಿರುಚಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಬದುಕಬೇಕಾಗಿತ್ತು ಇಂತಹ ಕಂದಾಚಾರಗಳನ್ನು ವಿರೋಧಿಸಿ ಅಂಬೇಡ್ಕರ್ ರವರು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿ ಸಮಾನತೆಯನ್ನು ಸಾರಿದರು ಎಂದರು.
ಬಳಿಕ ದಲಿತ ಸೇನೆಯ ನಗರ ಘಟಕದ ಅಧ್ಯಕ್ಷ ಚೇತನ ನಿರಾಳ್ಕರ್, ಸುನೀಲ ತ್ರಿಪಾಟಿ, ಗುಂಡಪ್ಪ ಹಸಿರಗುಂಡಗಿ ಸೇರಿದಂತೆ ಇನ್ನಿತರರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಮೇಶ ದೋಟಿಕೊಳ್, ಸಂಜು ಗುರಂಪಳ್ಳಿ, ಅಕ್ಷಯ ಬೊಮ್ಮನಳ್ಳಿ, ರಾಹುಲ್ ಟಿ ಯಾಕಾಪುರ್, ನಾಗಸೇನ್ ಬೊಮ್ಮನಳ್ಳಿ, ಚಂದ್ರು ಐನೋಳ್ಳಿ, ನಾಗು ಚಿಂಚೋಳಿ, ಲಕ್ಷ್ಮಿಕಾಂತ್ ಐನಾಪುರ ಸೇರಿದಂತೆ ಇನ್ನಿತರರಿದ್ದರು.