ಕಲಬುರಗಿ| "ವಿಶ್ವ ರೈತ ದಿನಾಚರಣೆ, ರೈತರ ಹಬ್ಬ ಹಾಗೂ ರಾಜ್ಯಮಟ್ಟದ ರೈತ ಸಮಾವೇಶ"
ಕಲಬುರಗಿ: "ನೂರಾರು ಕೋಟಿ ಹಣ ವ್ಯಯಿಸಿ ನಡೆಸಿದ ಬೆಳಗಾವಿ ಅಧಿವೇಶನದಲ್ಲಿ ರೈತರ ಕುರಿತಾದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆಗಳೇ ನಡೆದಿಲ್ಲ" ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮಂಗಳವಾರ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ "ವಿಶ್ವ ರೈತ ದಿನಾಚರಣೆ, ರೈತರ ಹಬ್ಬ ಹಾಗೂ ರಾಜ್ಯಮಟ್ಟದ ರೈತ ಸಮಾವೇಶ" ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಸರಕಾರ ಕಬ್ಬಿನ ಬಾಕಿ ಹಣ ಕೊಡುವಲ್ಲಿ ಕೆಲಸ ಮಾಡಿಲ್ಲ. ರಾಜ್ಯಾದ್ಯಂತ ಏಕರೂಪದ ದರ ನಿಗದಿ ರೂಪಿಸುವಲ್ಲಿ ಕಾಂಗ್ರೆಸ್ ಸರಕಾರ ಎಡವಿದೆ. ಸಕ್ಕರೆ ಕಾರ್ಖಾನೆಗಳ ಒತ್ತಡದಿಂದ ರೈತರನ್ನು ಬಲಿಕೊಡುತ್ತಿದೆ ಎಂದ ಅವರು, ಕಾರ್ಖಾನೆಗಳ ಮಾಲೀಕರನ್ನು ಹದ್ದು ಬಸ್ತಿನಲ್ಲಿಡಲು ಮುಖ್ಯ ಮಂತ್ರಿಗಳಿಗೆ ಆಗುವುದಿಲ್ಲವಾ? ಎಂದು ಪ್ರಶ್ನಿಸಿದರು.
ಈ ಹಿಂದಿನ ಸರ್ಕಾರದಲ್ಲಿ ರೈತರ ಮಕ್ಕಳಿಗೆ ನೀಡುವ ರೈತ ವಿದ್ಯಾನಿಧಿ ಯೋಜನೆಯನ್ನು ಮತ್ತೆ ಜಾರಿಗೊಳಿಸಬೇಕು, ಚುನಾವಣೆಗೂ ಪೂರ್ವದಲ್ಲ ಸಿದ್ದರಾಮಯ್ಯ ಅವರು ರೈತ ವಿದ್ಯಾನಿಧಿ, ಎಪಿಎಂಸಿ ಕಾಯ್ದೆ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದರು. ಆದರೆ ಈಗಲೂ ಆ ಕೆಲಸ ಸಿದ್ದರಾಮಯ್ಯ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಭೂಮಿ, ನೀರಾವರಿ, ಪ್ರವಾಹದಿಂದ ಕೊಚ್ಚಿ ಹೋಗಿದೆ, ಅವರಿಗೆ ಪರಿಹಾರ 2, 3 ಸಾವಿರ ಕೊಟ್ಟರೆ ಸರಿ ಹೋಗುತ್ತಾ ಎಂದು ಪ್ರಶ್ನಿಸಿದ ಕುರುಬೂರ್ ಶಾಂತಕುಮಾರ್, ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪಂಚವಾರ್ಷಿಕ ಯೋಜನೆಗಳು ಪ್ರಾರಂಭವಾದಾಗಿನಿಂದ ಮೊದಲ ಮೂರು ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಬಗ್ಗೆ ಪ್ರಸ್ತಾಪವೇ ಆಗಿಲ್ಲ, ಹಾಗಾಗಿ ಅಲ್ಲಿಂದಲೇ ಕೃಷಿ ಕ್ಷೇತ್ರ ಹಿಂದುಳಿಯಲು ಕಾರಣವಾಯಿತು ಎಂದು ಹೇಳಿದರು.
ಕೃಷಿ ಎಂದರೆ ಮುಖ್ಯಮಂತ್ರಿಗಳಿಗೆ ಅಸಡ್ಡೆಯಾಗಿದೆ, ಬೆಳೆ ಪರಿಹಾರ, ನೀರಾವರಿ, ಸೇರಿದಂತೆ ಹಲವು ಕೆಲಸಗಳು ಆಗುತ್ತಿಲ್ಲ. ಎಲ್ಲವೂ ಹೋರಾಟಗಳಿಂದಲೇ ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ, ಕಬ್ಬಿನ ಬೆಲೆ ನಿಗದಿಗೆ ಮೊದಲನೆ ಸಭೆ ಕರೆದು ನಿಗದಿಪಡಿಸಬೇಕಿತ್ತು. ಆದರೆ ಸರ್ಕಾರ ಈ ಕೆಲಸ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ರಾಷ್ಟ್ರೀಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್, ಹರಿಯಾಣದ ಅಭಿಮನ್ಯು ಕೊಹಾರ್, ತೆಲಂಗಾಣದ ವೆಂಕಟೇಶ್ ರಾವ್, ಕಬ್ಬು ಬೆಳೆಗಾರರು ಸಂಘದ ಕಾರ್ಯಾಧ್ಯಕ್ಷ ವೀರಣ್ಣಗೌಡ ಪಾಟೀಲ್, ಬಲ್ಲೂರು ರವಿಕುಮಾರ್, ಹಸಿರು ಸೇನೆಯ ರಾಜ್ಯಾಧ್ಯಕ್ಷ ಕರಬಸಪ್ಪ ಗೌಡ, ಪಿ.ಆರ್.ಪಾಂಡ್ಯದ, ತಮಿಳುನಾಡಿನ ರೈತ ನಾಯಕ ರಾಮನಗೌಡ , ಪಿ.ಆರ್.ಪಾಂಡ್ಯನ್, ಎಂಎಲ್ಸಿ ಬಿ.ಜಿ ಪಾಟೀಲ್, ಮಾಜಿ ಸಂಸದ ಉಮೇಶ್ ಜಾಧವ್, ಶಾಸಕ ಶರಣು ಸಲಗರ ಮತ್ತಿತ್ತರರು ಉಪಸ್ಥಿತರಿದ್ದರು.