Aland | ಸಿಯುಕೆಯಲ್ಲಿ ಎಸ್‌ಐಎಚ್–2026 ಜಾಗೃತಿ ಹಾಗೂ ಓರಿಯಂಟೇಶನ್ ಕಾರ್ಯಾಗಾರ

ನೈಜ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಿ: ಪ್ರೊ.ಚಿನ್ಮಯ್ ಸಹಾ

Update: 2026-08-22 19:57 IST

ಆಳಂದ: ನೈಜ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ರೂಪಿಸುವ ಮುನ್ನ ಅವುಗಳ ಮೂಲಸ್ವರೂಪವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು. ಸರಳ, ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉದಯೋನ್ಮುಖ ತಂತ್ರಜ್ಞಾನಗಳ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿರುವನಂತಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಐಐಎಸ್‌ಟಿ)ಯ ಪ್ರೊ. ಚಿನ್ಮಯ್ ಸಹಾ ಹೇಳಿದರು.

ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಂಪ್ಯೂಟರ್ ವಿಜ್ಞಾನ ವಿಭಾಗದಿಂದ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್)-2026 ಜಾಗೃತಿ ಹಾಗೂ ಓರಿಯಂಟೇಶನ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸ್ಮಾರ್ಟ್ ಮೊಬಿಲಿಟಿ, ಸೆನ್ಸಿಂಗ್ ಮತ್ತು ಸಂವಹನ ತಂತ್ರಜ್ಞಾನ, ವಿ2ಎಕ್ಸ್ ವ್ಯವಸ್ಥೆಗಳು, ಕೃಷಿ, ಆರೋಗ್ಯ, ವಿಪತ್ತು ನಿರ್ವಹಣೆ, ಬಾಹ್ಯಾಕಾಶ ಅನ್ವಯಿಕೆಗಳು ಹಾಗೂ ಕಡಿಮೆ ವೆಚ್ಚದ ತಂತ್ರಜ್ಞಾನಗಳು ಭವಿಷ್ಯದ ಪ್ರಮುಖ ಕ್ಷೇತ್ರಗಳಾಗಿವೆ. ವಿದ್ಯಾರ್ಥಿಗಳು ಈ ಕ್ಷೇತ್ರಗಳಲ್ಲಿ ಹೊಸ ಆಲೋಚನೆ ಹಾಗೂ ಆವಿಷ್ಕಾರಗಳಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ತಂತ್ರಜ್ಞಾನವು ಕೇವಲ ನಗರ ಪ್ರದೇಶಗಳ ಸೌಲಭ್ಯ ಹೆಚ್ಚಿಸುವ ಸಾಧನವಾಗದೆ, ಗ್ರಾಮೀಣ ಭಾಗದ ನೈಜ ಸಮಸ್ಯೆಗಳಿಗೂ ಪರಿಹಾರ ಒದಗಿಸುವಂತಿರಬೇಕು. ರೈತರು, ಗ್ರಾಮೀಣ ಜನರು, ಆರೋಗ್ಯ, ಸಾರಿಗೆ ಹಾಗೂ ವಿಪತ್ತು ನಿರ್ವಹಣೆ ಸೇರಿದಂತೆ ಜನಸಾಮಾನ್ಯರ ಬದುಕಿಗೆ ನೇರವಾಗಿ ಪ್ರಯೋಜನವಾಗುವ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕು ಎಂದರು.

ಹ್ಯಾಕಥಾನ್‌ನ್ನು ಕೇವಲ ಸ್ಪರ್ಧೆಯಾಗಿ ನೋಡಬೇಡಿ :

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ್ನು ಕೇವಲ ಸ್ಪರ್ಧೆಯಾಗಿ ಪರಿಗಣಿಸದೆ, ಆಲೋಚನೆಗಳನ್ನು ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸಿಕೊಳ್ಳುವ ವೇದಿಕೆಯಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಪ್ರೊ. ಚಿನ್ಮಯ್ ಸಹಾ ಹೇಳಿದರು.

ಸಮಸ್ಯೆ ಗುರುತಿಸುವಿಕೆ, ಸಂಶೋಧನೆ, ತಂಡದ ಕಾರ್ಯ, ಮಾದರಿ ಅಭಿವೃದ್ಧಿ ಹಾಗೂ ಅಂತಿಮವಾಗಿ ಸಮಾಜಕ್ಕೆ ಉಪಯುಕ್ತ ಪರಿಹಾರ ರೂಪಿಸುವ ಪ್ರತಿಯೊಂದು ಹಂತಕ್ಕೂ ಮಹತ್ವವಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಸಮಾಜದ ನೈಜ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದರು.

ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಯುವ ನಾವೀನ್ಯಕಾರರು ಸಮಸ್ಯೆಗಳನ್ನು ಗುರುತಿಸುವುದಕ್ಕೆ ಮಾತ್ರ ಸೀಮಿತವಾಗದೆ, ನೈಜ ಜೀವನದ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಂತಹ ವೇದಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಸಮಾಜಕ್ಕೆ ಕೊಡುಗೆ ನೀಡಬೇಕು. ದೇಶದ ಅಭಿವೃದ್ಧಿಗೆ ಯುವಕರ ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ಯುವಶಕ್ತಿಯೇ ಭಾರತದ ಅಭಿವೃದ್ಧಿಯ ಪ್ರಮುಖ ಚಾಲಕಶಕ್ತಿ. ಜ್ಞಾನವು ನಾವೀನ್ಯತೆ, ಕೌಶಲ್ಯ ಹಾಗೂ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಸಂಯೋಜಿತವಾದಾಗ ಮಾತ್ರ ಪರಿಣಾಮಕಾರಿ ಬದಲಾವಣೆ ಸಾಧ್ಯ ಎಂದರು.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಆಲೋಚನೆಗಳಾಗಿ ಹಾಗೂ ಆಲೋಚನೆಗಳನ್ನು ಕಾರ್ಯರೂಪಕ್ಕೆ ಪರಿವರ್ತಿಸಿ ನಾವೀನ್ಯತೆ ಆಧಾರಿತ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತು ಪ್ಯಾನಲ್ ಚರ್ಚೆ :

‘ವಿಕಸಿತ ಭಾರತ @2047ಕ್ಕಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆ’ ವಿಷಯದ ಕುರಿತು ಪ್ಯಾನಲ್ ಚರ್ಚೆ ನಡೆಯಿತು. ಇಂಜಿನಿಯರಿಂಗ್ ಶಾಲೆಯ ಡೀನ್ ಪ್ರೊ. ಅಮರೇಂದ್ರ ಮತ್ಸ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ವಿ. ಧಾರವಾಡರ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಗುರುರಾಜ್ ಮುಕರಂಬಿ ಚರ್ಚೆಯಲ್ಲಿ ಭಾಗವಹಿಸಿದ್ದರು.

ಡಾ. ಆಸ್ತಾ ಹಾಗೂ ಡಾ. ಸುಶ್ರುತ ಅವರು ತಾಂತ್ರಿಕ ಓರಿಯಂಟೇಶನ್ ಅಧಿವೇಶನ ನಡೆಸಿ, ಎಸ್‌ಐಎಚ್-2026ರ ಮಾರ್ಗಸೂಚಿಗಳು, ಪ್ರಸ್ತುತಿ ಸಿದ್ಧತೆ, ಪ್ರೋಟೋಟೈಪ್ ಅಭಿವೃದ್ಧಿ ಹಾಗೂ ಮೌಲ್ಯಮಾಪನ ಮಾನದಂಡಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಎಸ್‌ಐಎಚ್ ವಿಶ್ವವಿದ್ಯಾಲಯ ಸಂಯೋಜಕ ಡಾ. ರೋಹಿತ್ ಕುಮಾರ್ ಬಿ. ಸ್ವಾಗತಿಸಿದರು. ಡಾ. ಆಸ್ತಾ ವಂದಿಸಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News