ಬೆಂಗಳೂರು: ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸುವುದರ ಜೊತೆಗೆ ರಾಷ್ಟ್ರೀಯ ಏಕತೆ ಮತ್ತು ಮಾನವೀಯ ಸಹೋದರತ್ವದ ಸಂದೇಶ ಸಾರುವ ಉದ್ದೇಶದಿಂದ ಮದೀನ್ ಅಕಾಡೆಮಿ ಆಯೋಜಿಸಿದ್ದ ‘ಖೋಜ್ ಸಫರ್’ ರಾಷ್ಟ್ರೀಯ ಪರಂಪರೆ ಯಾತ್ರೆಯು ಬೆಂಗಳೂರಿನಲ್ಲಿ ನಡೆದ ಭವ್ಯ ಸಾಮರಸ್ಯ ಸಮಾವೇಶದೊಂದಿಗೆ ಸಮಾರೋಪಗೊಂಡಿತು.

ಮದೀನ್ ಅಕಾಡೆಮಿಯ 30ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ರಾಷ್ಟ್ರವ್ಯಾಪಿ ಯಾತ್ರೆಯು ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 37,730 ಕಿ.ಮೀ. ಸಂಚರಿಸಿತು. ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳ ನಡುವೆ ಕೋಮು ಸೌಹಾರ್ದ, ಸಹಬಾಳ್ವೆ ಮತ್ತು ಶಾಂತಿಯ ಸಂದೇಶವನ್ನು ಸಾರಲಾಯಿತು.

ಇಂಟರ್ನ್ಯಾಷನಲ್ ಇಂಟರ್ಫೇತ್ ಹಾರ್ಮನಿ ಇನಿಶಿಯೇಟಿವ್ ಸಹಯೋಗದಲ್ಲಿ ನಡೆದ ಸಮಾರೋಪ ಸಮಾವೇಶದಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.

ಕರ್ನಾಟಕದ ಆರೋಗ್ಯ ಸಚಿವ ಯು.ಟಿ. ಖಾದರ್ ಸಮಾವೇಶ ಉದ್ಘಾಟಿಸಿದರು. ಮದೀನ್ ಅಕಾಡೆಮಿಯ ಅಧ್ಯಕ್ಷ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರದ ಮಾಜಿ ನಾಗರಿಕ ವಿಮಾನಯಾನ ಸಚಿವ ಸಿ.ಎಂ. ಇಬ್ರಾಹಿಂ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಡಾ. ಹಾಫಿಝ್ ಸಯ್ಯಿದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಬೆಂಗಳೂರಿನ ಆರ್ಚ್ಬಿಷಪ್ ಡಾ. ಪೀಟರ್ ಮಚಾಡೊ ಹಾಗೂ ಗುರು ಸಿಂಗ್ ಸಭಾ ಗುರುದ್ವಾರದ ಮುಖ್ಯ ಗ್ರಂಥಿ ಜ್ಞಾನಿ ಸತ್ಪಾಲ್ ಸಿಂಗ್ ಉಪಸ್ಥಿತರಿದ್ದರು.

ವಿವಿಧ ರಾಜ್ಯಗಳಲ್ಲಿ ಸಂವಾದ, ಸಾಂಸ್ಕೃತಿಕ ಅರಿವು

‘ಖೋಜ್ ಸಫರ್: ದಿ ಇಂಡಿಯಾ ಕನೆಕ್ಟ್’ ಹೆಸರಿನಲ್ಲಿ ನಡೆದ ಯಾತ್ರೆಯು ಭಾರತದ ಬಹುತ್ವದ ಪರಂಪರೆ, ಸಾಂಸ್ಕೃತಿಕ ವೈಭವ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಅರಿಯುವ ಪ್ರಯತ್ನವಾಗಿತ್ತು. ವಿವಿಧ ಸಮುದಾಯಗಳ ನಡುವೆ ಸಹೋದರತ್ವದ ಬಂಧವನ್ನು ಬಲಪಡಿಸುವ ಉದ್ದೇಶದಿಂದ ಯಾತ್ರಾ ತಂಡವು ದೇಶದ ಹಲವು ರಾಜ್ಯಗಳಲ್ಲಿ ಸಂಚರಿಸಿತು.

ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳೊಂದಿಗೆ ವ್ಯಾಪಕ ಸಂವಾದ ನಡೆಸಲಾಯಿತು. ದೇಶದ ವಿವಿಧ ಭಾಷೆಗಳು, ಆಚಾರ-ವಿಚಾರಗಳು, ನಂಬಿಕೆಗಳು ಮತ್ತು ಸಾಮಾಜಿಕ ಸಂಪ್ರದಾಯಗಳನ್ನು ಅರಿಯಲು ಈ ಯಾತ್ರೆ ಅವಕಾಶ ಕಲ್ಪಿಸಿತು.

ಕೋಮು ಸೌಹಾರ್ದವು ಕೇವಲ ಆದರ್ಶವಾಗಿ ಉಳಿಯದೆ, ವಿವಿಧ ಸಮುದಾಯಗಳ ನಡುವಿನ ನೇರ ಸಂಪರ್ಕ, ಸಂವಾದ ಮತ್ತು ಸಹಕಾರದ ಮೂಲಕ ಕಾರ್ಯರೂಪಕ್ಕೆ ಬರಬೇಕು ಎಂಬ ಆಶಯವನ್ನು ಅಭಿಯಾನ ಬಿಂಬಿಸಿತು.

ಯಾತ್ರೆಯ ಅನುಭವಗಳು, ವಿವಿಧ ರಾಜ್ಯಗಳಲ್ಲಿ ನಡೆದ ಸಂವಾದಗಳು ಹಾಗೂ ಭಾರತದ ರಾಷ್ಟ್ರೀಯ ಪರಂಪರೆಯ ವೈವಿಧ್ಯಮಯ ಆಯಾಮಗಳನ್ನು ಒಳಗೊಂಡ ವಿಶೇಷ ದೃಶ್ಯಾವಳಿಯನ್ನು ಸಮಾರೋಪ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಇದಕ್ಕೆ ಸಭಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಕುರ್‌ ಆನ್ ಪಠಣ ಸ್ಪರ್ಧೆಗೆ 1,500ಕ್ಕೂ ಅಧಿಕ ಸಂಸ್ಥೆಗಳ ನೋಂದಣಿ

ಮುಂಬರುವ ರಮಝಾನ್ ತಿಂಗಳಲ್ಲಿ ಮದೀನ್ ಅಕಾಡೆಮಿ ಆಯೋಜಿಸಲಿರುವ ರಾಷ್ಟ್ರೀಯ ಕುರ್‌ ಆನ್ ಪಠಣ ಸ್ಪರ್ಧೆಯ ಬಗ್ಗೆಯೂ ಯಾತ್ರೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರಚಾರ ಮಾಡಲಾಯಿತು.

ಕುರ್‌ ಆನ್ ಜ್ಞಾನ ಮತ್ತು ಶುದ್ಧ ಪಠಣ ಕಲೆಯನ್ನು ಉತ್ತೇಜಿಸುವುದರ ಜೊತೆಗೆ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರುವುದು ಸ್ಪರ್ಧೆಯ ಉದ್ದೇಶವಾಗಿದೆ. ಈಗಾಗಲೇ ದೇಶದಾದ್ಯಂತ 1,500ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿವೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor