ಸುಂಟಿಕೊಪ್ಪ | ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು ಆರೋಪ; ಕುಟುಂಬಸ್ಥರು, ಸಾರ್ವಜನಿಕರಿಂದ ಪ್ರತಿಭಟನೆ
ಸುಂಟಿಕೊಪ್ಪ : ಇಲ್ಲಿನ ಖಾಸಗಿ ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಮತ್ತು ಸಾರ್ವಜನಿಕರು ಕ್ಲಿನಿಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸುಂಟಿಕೊಪ್ಪದ ಸ್ವಾಮಿ ಮತ್ತು ಸುಂದರಿ ದಂಪತಿ ಪುತ್ರ ವಿನೋದ್ (34) ಮೃತ ಯುವಕ.
ತೀವ್ರ ಸೊಂಟ ನೋವು, ಕೈ ನೋವಿನ ಹಿನ್ನೆಲೆಯಲ್ಲಿ ವಿನೋದ್ ಗುರುವಾರ ಸುಂಟಿಕೊಪ್ಪ ಕನ್ನಡ ವೃತ್ತದ ಬಳಿಯಿರುವ ಉಮಾ ಕ್ಲಿನಿಕ್‌ಗೆ ಬಂದಿದ್ದಾರೆ. ವೈದ್ಯರಾದ ಡಾ.ಯಶೋಧರ ಪೂಜಾರಿ ಅವರು ಪರೀಕ್ಷೆ ನಡೆಸಿ 2 ಚುಚ್ಚುಮದ್ದುಗಳನ್ನು ಒಂದರ ನಂತರ ಒಂದು ನೀಡಿದ್ದು ಕೆಲವು ಮಾತ್ರೆಗಳನ್ನು ನೀಡಿ ಮನೆಗೆ ಹೋಗಿ ವಿಶ್ರಾಂತಿ ಪಡೆದಲ್ಲಿ ವಿನೋದ್ ಸುಸ್ತು ನಿವಾರಣೆಗೊಳ್ಳಲಿದೆ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಅದರಂತೆ ವಿನೋದ್ ಮನೆಗೆ ಬಂದಿದ್ದು, ವಿಪರೀತ ಆಯಾಸಗೊಂಡ ಹಿನ್ನಲೆಯಲ್ಲಿ ಕುಂಟುಂಬಸ್ಥರು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ತೆರಳಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ವಿನೋದ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿನೋದ್ ಸಾವಿನಿಂದ ಆಘಾತಗೊಂಡ ಕುಟುಂಬಸ್ಥರು, ವೈದ್ಯರ ನಿರ್ಲಕ್ಷ್ಯದಿಂದ ವಿನೋದ್ ಮೃತಪಟ್ಟಿದ್ದು, ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶುಕ್ರವಾರ ಮಧ್ಯಾಹ್ನ ಮೃತದೇಹವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟು ಧರಣಿ ನಡೆಸಿದರು. ಇದರಿಂದ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡಚಣೆಯೂ ಉಂಟಾದ ಘಟನೆಯೂ ನಡೆಯಿತು.
ಸ್ಥಳಕ್ಕೆ ಕುಶಾಲನಗರ ನಗರ, ಮಡಿಕೇರಿ ಗ್ರಾಮಾಂತರ ಹಾಗೂ ಸಂಚಾರಿ ಪೊಲೀಸರನ್ನು ನಿಯೋಜಿಸುವ ಮೂಲಕ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿತ್ತು.
ನ.13ರಂದು ಪೊಲೀಸ್ ಠಾಣೆಯಲ್ಲಿ ತಪ್ಪಿತಸ್ಥ ವೈದ್ಯರ ಸಮ್ಮುಖದಲ್ಲಿ ಕುಟುಂಬಸ್ಥರೊಂದಿಗೆ ಸಭೆ ನಡೆಸುವ ಲಿಖಿತ ಒಪ್ಪಂದದೊಂದಿಗೆ ಪ್ರತಿಭಟನೆ ಕೈಬಿಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಮತ್ತು ಗ್ರಾಪಂ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾಹಿತಿ ನೀಡಿದರು.
ಮೃತದೇಹದ ಅಂತ್ಯಕ್ರಿಯೆಯು ಶುಕ್ರವಾರ ಸಂಜೆ ಹಿಂದೂ ರುದ್ರಭೂಮಿಯಲ್ಲಿ ನೇರವೇರಿತು.