Kodagu | ನಾಪತ್ತೆಯಾಗಿದ್ದ ಮಗು ಪತ್ತೆ; ರಾತ್ರಿ ಪೂರ್ತಿ ಕಾಫಿ ತೋಟದಲ್ಲೇ ಇದ್ದ ಮಗುವಿನ ಸುಳಿವು ನೀಡಿದ ಶ್ವಾನ!
ಮಡಿಕೇರಿ : ಕಳೆದು ಹೋಗಿದ್ದ ಎರಡು ವರ್ಷದ ಹೆಣ್ಣು ಮಗುವೊಂದು ಆಶ್ಚರ್ಯಕರ ರೀತಿಯಲ್ಲಿ ಪತ್ತೆಯಾಗಿದೆ. ರಾತ್ರಿ ಪೂರ್ತಿ ಕಾಫಿ ತೋಟದಲ್ಲೇ ಕಳೆದ ಪುಟಾಣಿಯನ್ನು ಸಾಕು ನಾಯಿಯೊಂದು ಪತ್ತೆ ಹಚ್ಚಿದೆ. ಈ ಘಟನೆ ಕೊಡಗು ಜಿಲ್ಲೆಯ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮದಲ್ಲಿ ನಡೆದಿದೆ.
ಕೊಂಗಣ ಗ್ರಾಮದ ಬೆಳೆಗಾರ ಕೆ.ಕೆ.ಗಣಪತಿ ಎಂಬುವವರ ತೋಟದ ಕೆಲಸಕ್ಕೆಂದು ಕೆಲವು ದಿನಗಳ ಹಿಂದೆ ಹುಣುಸೂರು ತಾಲ್ಲೂಕಿನ ಸುನಿಲ್ ಹಾಗೂ ನಾಗಿಣಿ ದಂಪತಿ ತಮ್ಮ 2 ವರ್ಷದ ಪುತ್ರಿಯೊಂದಿಗೆ ಆಗಮಿಸಿದ್ದರು. ಇದೇ ನ.29ರಂದು ಮಧ್ಯಾಹ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಪಕ್ಕದಲ್ಲೇ ಆಟವಾಡುತ್ತಿದ್ದ ಮಗು ಇದ್ದಕಿದ್ದ ಹಾಗೆ ನಾಪತ್ತೆಯಾಗಿದೆ. ಸುತ್ತಮುತ್ತ ಹುಡುಕಿದರೂ ಮಗು ಪತ್ತೆಯಾಗದ ಕಾರಣ ಹುಲಿ ಅಥವಾ ಬೇರೆ ಯಾವುದೋ ವನ್ಯಜೀವಿ ದಾಳಿ ಮಾಡಿರಬಹುದೆಂದು ಊಹಿಸಿದ ದಂಪತಿ ಆತಂಕಕ್ಕೊಳಗಾದರು. ತೋಟದ ಮಾಲೀಕರ ಮೂಲಕ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ತಕ್ಷಣ ಸ್ಪಂದಿಸಿದ ಈ ಎರಡೂ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮಗುವಿನ ಹುಡುಕಾಟದಲ್ಲಿ ತೊಡಗಿದರು. ಸುಮಾರು 80 ಮಂದಿಯ ತಂಡ ಪ್ರತ್ಯೇಕ ಗುಂಪುಗಳಾಗಿ ವಿವಿಧೆಡೆ ಕಾರ್ಯಾಚರಣೆ ನಡೆಸಿದವು. ಆದರೆ ರಾತ್ರಿಯಾದರೂ ಮಗುವಿನ ಸುಳಿವು ದೊರೆಯಲಿಲ್ಲ. ದಂಪತಿ ಕಣ್ಣೀರಿನಲ್ಲೇ ರಾತ್ರಿ ಕಳೆದರು.
ಮರುದಿನ ರವಿವಾರ ಬೆಳಿಗ್ಗೆಯೇ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತೆ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಮಗು ನಾಪತ್ತೆಯಾದ ಸ್ಥಳದಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿ ಬೆಳೆಗಾರ ಅನಿಲ್ ಎಂಬುವವರಿಗೆ ಸೇರಿದ ‘ಓರಿಯೋ’ ಹೆಸರಿನ ಸಾಕು ನಾಯಿ ತೋಟದ ಎತ್ತರದ ಪ್ರದೇಶದಲ್ಲಿ ಬೊಗಳುತ್ತಿದ್ದ ದೃಶ್ಯ ಕಂಡು ಬಂದಿದೆ. ಇದನ್ನು ಗಮನಿಸಿದ ಅನಿಲ್ ಹಾಗೂ ಸ್ಥಳೀಯರು ಮಗುವನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ನಂತರ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.
ಈ ಘಟನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಮಗು ಅಳದೇ ತೋಟದ ಮೂಲಕ ಕ್ರಮಿಸಿದ್ದೇ ಪತ್ತೆ ಕಾರ್ಯ ವಿಳಂಬವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.