ಕೊಡವ ಸಾಕ್ಷ್ಯಚಿತ್ರ ‘ಉಮ್ಮತ್ತಾಟ್’ ಇಂಡಿಯನ್ ಪನೋರಮಾಗೆ ಆಯ್ಕೆ
ಮಡಿಕೇರಿ ನ.12 : ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ನಿರ್ಮಿಸಿ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ನಿರ್ದೇಶಿಸಿರುವ ‘ಉಮ್ಮತ್ತಾಟ್’ ಕೊಡವ ಸಾಕ್ಷ್ಯಚಿತ್ರ ಇಂಡಿಯನ್ ಪನೋರಮಾಗೆ ಆಯ್ಕೆಯಾಗಿದೆ. ಗೋವಾದಲ್ಲಿ ನಡೆಯುವ 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನ.27ರಂದು ‘ಉಮ್ಮತ್ತಾಟ್’ ಪ್ರದರ್ಶನಗೊಳ್ಳಲಿದೆ.
‘ಉಮ್ಮತ್ತಾಟ್’ ಕೊಡವ ಜಾನಪದ ನೃತ್ಯ ಪ್ರಕಾರವಾಗಿದ್ದು, ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಕಲೆಯ ಮೇಲೆ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿದೆ. ಒಟ್ಟು 13 ನೃತ್ಯ ಪ್ರಕಾರಗಳನ್ನು ಚಿತ್ರೀಕರಿಸಲಾಗಿದ್ದು, 153 ಕಲಾವಿದರು ನೃತ್ಯ ಮಾಡಿದ್ದಾರೆ. ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ನಿರ್ದೇಶನದ ಸಾಕ್ಷ್ಯಚಿತ್ರಕ್ಕೆ ‘ಉಮ್ಮತ್ತಾಟ್’ ತರಬೇತುದಾರರಾದ ಕಲಾವಿದೆ ಬೊಳ್ಳಜಿರ ಯಮುನಾ ಅಯ್ಯಪ್ಪ ಅವರ ಸಹ ನಿರ್ದೇಶನವಿದ್ದು, ನಿರೂಪಣೆಯನ್ನು ಕೂಡ ಮಾಡಿದ್ದಾರೆ. ವಸ್ತ್ರ ವಿನ್ಯಾಸ ಮತ್ತು ನೃತ್ಯ ಪ್ರದರ್ಶನಕ್ಕೆ ಸಹಕಾರ ನೀಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತೆ, ನೃತ್ಯ ಮತ್ತು ನೃತ್ಯ ಸಂಗೀತ ಭರತನಾಟ್ಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಕೇಂದ್ರ ಸರಕಾರದ ಜೂನಿಯರ್ ಫೆಲೋಶಿಪ್ ಪಡೆದಿರುವ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಭರತನಾಟ್ಯ ಕಲಾವಿದೆ ಮುಕ್ಕಾಟಿರ ಶಿಲ್ಪ ನಂಜಪ್ಪ ಅವರು ನೃತ್ಯ ಪ್ರಕಾರಗಳನ್ನು ನಿರೂಪಣೆ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಮುಟ್ಲುವಿನಿಂದ ಕುಟ್ಟದವರೆಗಿನ ವಿವಿಧೆಡೆಯ ಸುಂದರ ಪ್ರದೇಶದಲ್ಲಿ ಸಾಕ್ಷ್ಯಚಿತ್ರ ಚಿತ್ರೀಕರಣಗೊಂಡಿದ್ದು, ಛಾಯಾಗ್ರಾಹಕ ವಿನಾಯಕ ರೇವಡಿ ಅವರ ಛಾಯಾಗ್ರಹಣ ಹಾಗೂ ಟಿ.ಮುತ್ತುರಾಜು ಅವರ ಸಂಕಲನವಿದೆ. ತಂತಿಪಾಲ, ದೇವಸ್ತೂರು, ಬಲಂಬೇರಿ, ಕಾಕೋಟುಪರಂಬು, ನೀರುಕೊಲ್ಲಿ, ಮುಟ್ಲು, ಬಾಳೆಲೆ ಆದೆಂಗಡ ಐನ್ ಮನೆ, ಗುಹ್ಯ ಅಗಸ್ತೇಶ್ವರ ದೇವಾಲಯ, ಚೇರಂಬಾಣೆಯ ಗೋಪಾಲಕೃಷ್ಣ ದೇವಾಲಯ ಮುಂತಾದೆಡೆ ಚಿತ್ರೀಕರಿಸಲಾಗಿದೆ.
ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹಾಗೂ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ದಂಪತಿಗೆ ‘ಉಮ್ಮತ್ತಾಟ್’ ಆಯ್ಕೆ ಮತ್ತೊಂದು ಹೆಗ್ಗಳಿಕೆಯಾಗಿದೆ.
ಮೊದಲ ಸಾಕ್ಷ್ಯಚಿತ್ರ :
‘ಉಮ್ಮತ್ತಾಟ್’ ಕೊಡವ ಸಾಕ್ಷ್ಯಚಿತ್ರ ಇಂಡಿಯನ್ ಪನೋರಮಾಗೆ ಆಯ್ಕೆಯಾದ ಮೊದಲ ಕೊಡವ ಭಾಷಾ ಸಾಕ್ಷ್ಯಚಿತ್ರವಾಗಿದ್ದು, ಇದೊಂದು ದಾಖಲೆಯಾಗಿದೆ ಎಂದು ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಜಾನಪದ ಕಲಾವಿದೆ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಜನಪದ ನೃತ್ಯ ಅಧ್ಯಯನ ಗ್ರಂಥ ರಚಿಸಿರುವ ಸಾಹಿತಿ ಡಾ.ರೇವತಿ ಪೂವಯ್ಯ, ಸಾಹಿತಿ ಹಾಗೂ ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ, ತಾಯಿ ಬೇರು ಪುಸ್ತಕದ ರಚನೆಕಾರರಾದ ಬೆಂಗಳೂರಿನ ಸ್ನೇಹ ಕಪ್ಪಣ್ಣ ಅವರುಗಳ ಸಹಕಾರ ಮತ್ತು ಸಲಹೆಯನ್ನು ಪಡೆದು ಸಾಕ್ಷ್ಯಚಿತ್ರ ‘ಉಮ್ಮತ್ತಾಟ್’ ನ್ನು ತಯಾರಿಸಲಾಗಿದೆ.
ನ.27ರಂದು ಮಧ್ಯಾಹ್ನ 2 ಗಂಟೆಗೆ ಗೋವಾದ ಪಂಜಿಮ್ ನ ಇನೋಕ್ಸ್ ಆಡಿ 2 ಹಾಲ್ ನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಉಮ್ಮತ್ತಾಟ್’ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.