×
Ad

ಭರವಸೆಗಳನ್ನು ಬಿಜೆಪಿ ಯಾವತ್ತೂ ಈಡೇರಿಸಿಲ್ಲ, ಮುಂದೆಯೂ ಈಡೇರಿಸುವುದಿಲ್ಲ : ಸಿಎಂ ಸಿದ್ದರಾಮಯ್ಯ

Update: 2024-04-14 14:29 IST

ಮಡಿಕೇರಿ : ಕರ್ನಾಟಕದಲ್ಲಿ 2018 ರಲ್ಲಿ 600 ಭರವಸೆಗಳನ್ನು ಕೊಟ್ಟ ಬಿಜೆಪಿ 60 ಭರವಸೆಗಳನ್ನೂ ಈಡೇರಿಸಿಲ್ಲ. ಭರವಸೆಗಳನ್ನು ಬಿಜೆಪಿ ಯಾವತ್ತೂ ಈಡೇರಿಸಿಲ್ಲ, ಮುಂದೆಯೂ ಈಡೇರಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಮೊದಲೇ ಮಾಡಿರುವ ಚುನಾವಣಾ ಘೋಷಣೆಗಳ ಬಗ್ಗೆ ಚರ್ಚೆಯಾಗಬೇಕು. ವಿದೇಶಗಳಿಂದ ಕಪ್ಪುಹಣ ತಂದು 15 ಲಕ್ಷ ರೂ. ತಂದುಕೊಟ್ಟರೇ?, 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು, ಮೆಕ್ ಇನ್ ಇಂಡಿಯಾ , ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಯಿತೇ? ಎಂದು ಪ್ರಶ್ನಿಸಿದರು.

ಆರೋಗ್ಯ ವಿಚಾರಿಸಿದ್ದೇನೆ :

ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಸೋಲುವ ಭಯದಿಂದ ಸಿಎಂ ಭೇಟಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿ‌ಕೆಗೆ ಪ್ರತಿಕ್ರಿಯಿಸಿ, "ನಾನು ಶ್ರೀನಿವಾಸ ಪ್ರಸಾದ್ ರಾಜಕೀಯದಲ್ಲಿ ಸಮಕಾಲೀನರು. ಅವರು 74ರಲ್ಲಿಯೇ ವಿಧಾನಸಭೆಗೆ ಸ್ಪರ್ಧಿಸಿದ್ದರು, ಒಟ್ಟಿಗೆ ರಾಜಕಾರಣದಲ್ಲಿದ್ದೆವು. ದೀರ್ಘ ಕಾಲದ ಸ್ನೇಹಿತ. ಅವರು ರಾಜಕೀಯದಿಂದ ನಿವೃತ್ತರಾಗಿ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದೇನೆ ಎಂದರು.

ಹೆಣ್ಣುಮಕ್ಕಳ ಬಗ್ಗೆ ಕುಮಾರಸ್ವಾಮಿಯವರ ಮನಸ್ಥಿತಿ ಏನು ಎಂದು ಅರ್ಥವಾಗುತ್ತದೆ :

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದಾಗಿ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, " ಎಚ್‌ಡಿಕೆ ಯವರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು. ದಾರಿತಪ್ಪಿದ್ದಾರೆ ಎಂದರೇನು?.. ಅವರ ಹೇಳಿಕೆಯಿಂದ ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಏನು ಎಂದು ಅರ್ಥವಾಗುತ್ತದೆ. 2 ಬಾರಿ ಮುಖ್ಯಮಂತ್ರಿಯಾಗಿದ್ದರು ಈ ರೀತಿ ಮಾತನಾಡಿದರೆ ಜನ ಸಹಿಸುತ್ತಾರೆಯೇ? ಎಂದು ಅಸಮಾಧಾನ ಹೊರಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News