ಮಡಿಕೇರಿ | ಗೋಣಿಕೊಪ್ಪ, ತಿತಿಮತಿ ಭಾಗದಲ್ಲಿ ಹುಲಿ ಸಂಚಾರ : ಗ್ರಾಮಸ್ಥರಲ್ಲಿ ಆತಂಕ
ಮಡಿಕೇರಿ, ಜ.23: ದಕ್ಷಿಣ ಕೊಡಗಿನ ವಿವಿಧೆಡೆ ಹುಲಿ ಉಪಟಳ ತೀವ್ರಗೊಂಡಿದ್ದು, ಗೋಣಿಕೊಪ್ಪ ಮತ್ತು ತಿತಿಮತಿ ಭಾಗದ ಹೆದ್ದಾರಿಯಲ್ಲಿ ಹುಲಿ ಸಂಚರಿಸುತ್ತಿರುವ ದೃಶ್ಯ ಸೆರೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ರಸ್ತೆ ಮೂಲಕ ಸಂಚರಿಸುವ ವಾಹನ ಚಾಲಕರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಹುಲಿ ಸಂಚಾರದ ಮಾಹಿತಿ ಪಡೆದಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ತಕ್ಷಣವೇ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡು ಹುಲಿಯನ್ನು ಸೆರೆ ಹಿಡಿಯಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಹುಲಿ ದಾಳಿಗಳು ನಡೆಯುತ್ತಿದ್ದು, ಹಲವು ಹಸುಗಳು ಬಲಿಯಾಗಿವೆ. ಇದೇ ವೇಳೆ ಕಾಡಾನೆಗಳ ಉಪಟಳವೂ ಹೆಚ್ಚಾಗಿರುವುದರಿಂದ ಗ್ರಾಮಸ್ಥರು ಭಯ ಹಾಗೂ ಆತಂಕದ ನಡುವೆಯೇ ದಿನ ಕಳೆಯುವಂತಾಗಿದೆ.
ವನ್ಯಜೀವಿ ಉಪಟಳದ ಸಮಸ್ಯೆಯನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ.