×
Ad

Gonikoppa | ಚಾಲಕ ನವಾಝ್ ಸಾವು ಪ್ರಕರಣ; ಮಹಿಳೆ ಸೇರಿ ಐವರು ಆರೋಪಿಗಳ ಬಂಧನ

Update: 2026-01-04 22:44 IST

ಮಡಿಕೇರಿ : ಗೋಣಿಕೊಪ್ಪಲಿನ ಹರಿಶ್ಚಂದ್ರಪುರದ ನಿವಾಸಿ ಚಾಲಕ ವೃತ್ತಿಯ ನವಾಝ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ, ಕಾವ್ಯಾ, ಅಶೋಕ್, ಕುಮಾರ್ ಹಾಗೂ ಮಹೇಂದ್ರ ಬಂಧಿತ ಆರೋಪಿಗಳು. ಡಿ.31ರಂದು ರಾತ್ರಿ ತನ್ನ ಕಾರಿನಲ್ಲಿ ಕುಂದಾ ಗ್ರಾಮಕ್ಕೆ ತೆರಳಿದ್ದ ನವಾಝ್ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ನವಾಝ್ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಐವರನ್ನು ಬಂಧಿಸಿದ್ದಾರೆ. ಕುಂದಾ ಗ್ರಾಮಕ್ಕೆ ನಡುರಾತ್ರಿಯ ವೇಳೆ ತೆರಳಿದ್ದ ನವಾಝ್ ಮತ್ತೊಬ್ಬ ಚಾಲಕ ಪೂರ್ಣಚಂದ್ರ ತೇಜಸ್ವಿಯ ಮನೆ ಬಾಗಿಲು ಬಡಿದು ಆತನ ಪತ್ನಿ ಕಾವ್ಯಾಳ ಹೆಸರು ಕರೆದಿದ್ದ ಎಂದು ಹೇಳಲಾಗಿದೆ. ಈ ಸಂದರ್ಭ ಮನೆಯಿಂದ ಹೊರ ಬಂದ ತೇಜಸ್ವಿ ನವಾಝ್‌ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಅಲ್ಲದೆ ಅಶೋಕ್, ಕುಮಾರ್ ಹಾಗೂ ಮಹೇಂದ್ರನ ಸಹಕಾರ ಪಡೆದು ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ನವಾಝ್‌ನನ್ನು ರಸ್ತೆ ಬದಿ ಬಿಟ್ಟು, ಆತನ ಕಾರನ್ನು ರಸ್ತೆ ಬದಿಯ ಚರಂಡಿಗೆ ತಳ್ಳಿ ಪ್ರಕರಣವನ್ನು ಅಪಘಾತ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಲಾಗಿದೆ.

ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಮಾರ್ಗ ದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News