Madikeri | ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ ಪ್ರಕರಣ : 8 ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ | PC: freepik
ಮಡಿಕೇರಿ : ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸ್ಕೇರಿ ನಿವಾಸಿ ದೇವಯ್ಯ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಬುರೋ ಎಂಬುವವರನ್ನು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕಿರುವ ಕುರಿತು ಜ.13 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೊಸ್ಕೇರಿ ನಿವಾಸಿಗಳಾದ ಪ್ರಶಾಂತ್ ಮುದಿ (27), ದೇವಯ್ಯ ಎಂ.ಎಸ್ (71), ಭಾರತಿ ಎಂ.ಡಿ (57), ಶ್ರೀಕಾಂತ್ ಮುದಿ (25), ಸುಧನ್ ಮುದಿ (50), ಲಕ್ಷ್ಮೀ ಮುದಿ (37), ತನುಶ್ರೀ (20) ಹಾಗೂ ಬಸಂತಿ ಮುದಿ (49) ಬಂಧಿತ ಆರೋಪಿಗಳಾಗಿದ್ದಾರೆ.
ಜ.11 ರಂದು ರಾತ್ರಿ ಬುರೋ ಹಾಗೂ ಅವರ ಪುತ್ರ ಪ್ರಶಾಂತ್ ಮುದಿ ಮದ್ಯಪಾನ ಮಾಡಿ ಕ್ಷುಲಕ ಕಾರಣಕ್ಕೆ ಜಗಳವಾಡಿದ್ದರು. ಈ ಸಂದರ್ಭ ಪ್ರಶಾಂತ್ ಮುದಿ ದೊಣ್ಣೆಯಿಂದ ಹಲ್ಲೆ ಮಾಡಿದ್ದರಿಂದ ಬುರೋ ಮೃತಪಟ್ಟಿದ್ದರು. ಬುರೋನ ಮೃತ ದೇಹವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ಸೂರಜ್.ಪಿ.ಎ, ಮಡಿಕೇರಿ ಗ್ರಾಮಾಂತರ ಠಾಣೆಯ ಪಿಐ ಚಂದ್ರಶೇಖರ್ ಹೆಚ್.ವಿ, ಪಿಎಸ್‍ಐ ಜವರೇಗೌಡ, ಗ್ರಾಮಾಂತರ ಠಾಣೆ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದಕ್ಷ ಕಾರ್ಯಾಚರಣೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.