×
Ad

ಕೊಡಗಿನಲ್ಲಿ ಮಳೆ ಬಿರುಸು : ವಿವಿಧೆಡೆ ಹಾನಿ : ಜು.8ರಂದು ಶಾಲೆಗಳಿಗೆ ರಜೆ

Update: 2026-07-07 21:16 IST

ಮಡಿಕೇರಿ : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಜು.8 ರಂದು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಭಾರೀ ಗಾಳಿ ಮಳೆಯಿಂದಾಗಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ನದಿ ನೀರು ರಸ್ತೆಯನ್ನು ಆವರಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಹಳೇ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ಇಳಿಜಾರು ರಸ್ತೆಯ ಒಂದು ಪಾಶ್ರ್ವದಲ್ಲಿನ ಕಾಲ್ನಡಿಗೆಯ ಹಾದಿ ಕುಸಿದು ಹೋಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿನ ವಾಹನ ಸಂಚಾರವನ್ನು ಸೀಮಿತಗೊಳಿಸಲಾಗಿದ್ದು, ಬಸ್‍ಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.

ಈ ಭೂ ಕುಸಿತದ ಹಿನ್ನೆಲೆ ಮುಖ್ಯ ರಸ್ತೆ ಅಪಾಯಕ್ಕೆ ಸಿಲುಕಿದ್ದು, ರಸ್ತೆಯಲ್ಲಿ ಏಕಮುಖ ಸಂಚಾರ ಜಾರಿ ಮಾಡಲಾಗಿದೆ. ಕೆಎಸ್‍ಆರ್‍ಟಿಸಿ ಬಸ್‍ಗಳು ಕೈಗಾರಿಕಾ ಬಡಾವಣೆ ಮೂಲಕ, ರಾಜಾಸೀಟ್ ಮಾರ್ಗವಾಗಿ ಹಾದು ಹೋಗಲು ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಕುಸಿದ ರಸ್ತೆ- ದಕ್ಷಿಣ ಕೊಡಗಿನ ಹಾತೂರು ಗ್ರಾಮ ಪಂಚಾಯ್ತಿಯ ಕೊಳತ್ತೊಡು ಬೈಗೋಡು ಗ್ರಾಮದ ಮುಖ್ಯ ರಸ್ತೆಯ ಒಂದು ಪಾರ್ಶ್ವ ಭಾರೀ ಮಳೆಯಿಂದ ಸಂಪೂರ್ಣ ಕುಸಿದಿದ್ದು, ಗ್ರಾಮೀಣರ ಸಂಚಾರಕ್ಕೆ ತೊಡಕುಂಟಾಗಿದೆ.

ಜಲಕ್ರೀಡೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ

ಕೊಡಗು ಜಿಲ್ಲೆಯಾದ್ಯತ ಬಿರುಸಿನ ಮಳೆಯಾಗುತ್ತಿದ್ದು, ಈ ಸಂಬಂಧ ಯಾವುದೇ ಅವಘಡಗಳಿಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ಹರಿವಿನ ಪ್ರದೇಶಗಳಲ್ಲಿನ ಜಲಕ್ರೀಡೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಕೊಡಗು ಜಿಲ್ಲೆಯಾದ್ಯಂತ ಇರುವ ಜಲಪಾತಗಳು, ಝರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಅಣೆಕಟ್ಟು, ಜಲಾಶಯದ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಅನಧಿಕೃತವಾಗಿ ನೀರಿನಲ್ಲಿ ಇಳಿಯುವುದು, ಮುಳುಗು ಹೊಡೆಯುವುದು, ಸಾಹಸ ಚಟುವಟಿಕೆ ನಡೆಸುವುದು, ಈಜುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಆದೇಶಿಸಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News