×
Ad

ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿ : ಯು.ಟಿ.ಖಾದರ್

Update: 2026-07-06 23:25 IST

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಅನಾವೃಷ್ಠಿಯನ್ನು ಎದುರಿಸಲು ಸಜ್ಜಾಗುವಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ನಿರ್ದೇಶನ ನೀಡಿದ್ದಾರೆ.

ನಗರದ ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಸದ್ಯ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ. ಜೊತೆಗೆ ‘ಎಲ್ ನಿನೊ’ ಪರಿಣಾಮದಿಂದ ಕಡಿಮೆ ಮಳೆಯಾದಲ್ಲಿ ಅನಾವೃಷ್ಠಿಯನ್ನೂ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಸಚಿವರು ತಿಳಿಸಿದರು.

ಪ್ರಾಕೃತಿಕ ವಿಕೋಪಗಳ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವುದು ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು. ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಧಿಕಾರಿಯವರ ಪಿಡಿ ಖಾತೆಯಲ್ಲಿ 3.05 ಕೋಟಿ ರೂ.ಲಭ್ಯವಿದೆ. ಜೊತೆಗೆ 5 ತಾಲೂಕುಗಳ ದಂಡಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 141.39 ಲಕ್ಷ ರೂ.ಲಭ್ಯವಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಗಮನ ಹರಿಸಿ, ಒಡೆದಿರುವ ಪೈಪ್‌ಲೈನ್‌ಗಳನ್ನು ಸರಿಪಡಿಸಬೇಕು. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನ ಹರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಸೋಮವಾರಪೇಟೆ ತಾಲೂಕಿನ ಗ್ರಾಮದಲ್ಲಿ ಪೈಪ್‌ಲೈನ್ ಒಡೆದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದನ್ನು ಸರಿಪಡಿಸುವಂತಾಗಬೇಕೆಂದು ಹೇಳಿದರು.

ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಬೇಕು. ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡುವಂತೆ ಸಲಹೆ ಮಾಡಿದರು.

ಕುಡಿಯುವ ನೀರು ಪೂರೈಕೆ ಕಾಮಗಾರಿ ಸಂಬಂಧ ಜಿಪಂ ಸಿಇಒ ಅವರು ಗಂಭೀರವಾಗಿ ಪರಿಗಣಿಸಿ ಪ್ರಗತಿ ಪರಿಶೀಲನೆ ನಡೆಸುವಂತೆ ಸಚಿವರು ಸಲಹೆ ನೀಡಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಎಸ್ಪಿ ಬಿಂದುಮಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಸಹಿತ ಇತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News