×
Ad

ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Update: 2026-02-12 20:05 IST

ಮಡಿಕೇರಿ : ದುಡಿಯುವ ವರ್ಗಕ್ಕೆ ಮಾರಕವಾಗಿರುವ ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಕೋಡ್‍ಗಳನ್ನು ಹಿಂದಕ್ಕೆ ಪಡೆಯಬೇಕು, ನರೇಗಾ ಯೋಜನೆಯನ್ನು ಮತ್ತೆ ಆರಂಭಿಸಬೇಕೆಂದು ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ಒಕ್ಕೂಟಗಳಿಂದ ನಗರದಲ್ಲಿಂದು ಪ್ರತಿಭಟನೆ ನಡೆಯಿತು.

ಜಂಟಿ ಕ್ರಿಯಾ ಸಮಿತಿಯ ಪ್ರಮುಖರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ವಿವಿಧ ಕಾರ್ಮಿಕ ಸಂಘಟನೆಗಳ ನೂರಾರು ಮಂದಿ ಘೋಷಣೆಗಳ ಸಹಿತ ನಗರದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು, ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ಹಲ ದಶಕಗಳ ಹೋರಾಟಗಳಿಂದ ಕಾರ್ಮಿಕರಿಗೆ ನ್ಯಾಯ ಒದಗಿಸುವ 41 ಕಾನೂನುಗಳನ್ನು ದುಡಿಯುವ ವರ್ಗ ಪಡೆದುಕೊಂಡಿದೆ. ಇಂತಹ ಕಾನೂನುಗಳಲ್ಲಿ 21 ಕಾನೂನುಗಳನ್ನು ಇಂದಿನ ಕೇಂದ್ರ ಸರಕಾರ ನಾಲ್ಕು ಲೇಬರ್ ಕೋಡ್‍ಗಳನ್ನಾಗಿ ಬದಲಿಸುವ ಮೂಲಕ, ಕಾರ್ಮಿಕ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಆ ಮೂಲಕ ಬಂಡವಾಳಶಾಹಿಗಳಿಗೆ ಅನುಕೂಲತೆಯನ್ನು ಕಲ್ಪಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಕಾರ್ಮಿಕ ಕಾಯ್ದೆಗಳ ನಾಲ್ಕು ಕೋಡ್‍ಗಳ ವಿರುದ್ಧ ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ದೊಡ್ಡ ಮಟ್ಟದ ಹೋರಾಟಗಳು ನಡೆದಿದೆ. ಹೀಗಿದ್ದೂ ಕೇಂದ್ರ ಸರ್ವಾಧಿಕಾರಿ ಧೋರಣೆಯಿಂದ ಇವುಗಳನ್ನು ಜಾರಿ ಮಾಡಿದೆ. ಇದು ಕೇವಲ ಬಂಡವಾಳಶಾಹಿ ವರ್ಗವನ್ನು ಓಲೈಸುವ ಮತ್ತು ಅವರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಪ್ರಯತ್ನವಾಗಿದೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಮುಖ ಹಾಗೂ ರೈತ ಸಂಘದ ಮುಖಂಡ ನೆರವಂಡ ಉಮೇಶ್ ಮಾತನಾಡಿದರು.

ಕರ್ನಾಟಕ ಸರಕಾರ ಕಾರ್ಮಿಕ ಸಂಹಿತೆಗಳಿಗೆ ಸೇವಾ ನಿಯಮಾವಳಿಗಳನ್ನು ರಚಿಸಬಾರದು ಮತ್ತು ಉಳಿದ ಎಲ್ಲಾ ಜನ ವಿರೋಧಿ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ಸಂದರ್ಭ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಪ್ರಮುಖರು ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ.ಸಾಬು, ಜಂಟಿ ಕ್ರಿಯಾ ಸಮಿತಿಯ ಡಿ.ಎಸ್.ನಿರ್ವಾಣಪ್ಪ, ಕಾಂಗ್ರೆಸ್ ಮುಖಂಡರಾದ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್‍ನ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಆರ್.ದಿನೇಶ್, ಗೌರವ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಮಣಿ, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಅಣ್ಣಯ್ಯ, ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಮಹದೇವ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಸುಮಿತ್ರ, ಪ್ರಧಾನ ಕಾರ್ಯದರ್ಶಿ ಜಮುನ, ಬಿಸಿ ಊಟ ಕಾರ್ಮಿಕರ ಸಂಘದ ಅಧ್ಯಕ್ಷೆ ಕುಸುಮ, ಕಾಫಿ ಕ್ಯೂರಿಂಗ್ ವರ್ಕರ್ಸ್ ಯೂನಿಯನ್ ಅಧ್ಯಕ್ಷರಾದ ಮಂಜುನಾಥ್, ಆಸ್ಪತ್ರೆ ನೌಕರರ ಸಂಘದ ಅಧ್ಯಕ್ಷೆ ಜಾನಕಿ, ತೋಟ ಕಾರ್ಮಿಕ ಸಂಘದ ಪುಷ್ಪ, ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಾಜಿ ರಮೇಶ್, ರೈತ ಸಂಘದ ಮುಖಂಡರಾದ ಲಕ್ಷ್ಮಣ್, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಮುಖ ಟಿ.ಟಿ.ಉದಯ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News