ಸಿವಿಲ್ ನ್ಯಾಯಾಧೀಶರಾಗಿ ವಿರಾಜಪೇಟೆಯ ಸೈಯದಾ ಕಾಶ್ಮೀರ ಸಿಮ್ರಾನ್ ಆಯ್ಕೆ
ಸೈಯದಾ ಕಾಶ್ಮೀರ ಸಿಮ್ರಾನ್
ಮಡಿಕೇರಿ: ವೀರಾಜಪೇಟೆ ಪಟ್ಟಣದ ನಿವಾಸಿ ಮೌಂಟನ್ ವ್ಯೂ ಶಾಲೆಯ ಸಂಸ್ಥಾಪಕರಾದ ದಿ. ಸಯ್ಯದ್ ನಝೀರ್ ಅಹಮ್ಮದ್ ಮತ್ತು ಸೈಯದಾ ನಿಖತ್ ಅಸ್ಮ ಅವರ ಪುತ್ರಿ ಸೈಯದಾ ಕಾಶ್ಮೀರ ಸಿಮ್ರಾನ್ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಸಿವಿಲ್ ಜಡ್ಜ್ ನೇಮಕಾತಿ ಪರೀಕ್ಷೆಯನ್ನು ಎದುರಿಸಿದ ಸೈಯದಾ ಕಾಶ್ಮೀರ ಸಿಮ್ರಾನ್ ಅವರು ಮೊದಲ ಪ್ರಯತ್ನದಲ್ಲಿಯೇ 30ನೇ ರ‍್ಯಾಂಕ್ ಗಳಿಸಿ ನ್ಯಾಯಾಧೀಶರ ಹುದ್ದೆಗೆ ನಿಯುಕ್ತಿಗೊಂಡಿದ್ದಾರೆ.
ವೀರಾಜಪೇಟೆ ಮೌಂಟನ್ ವ್ಯೂ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಸೈಯದಾ ಅವರು, ಮಂಗಳೂರಿನಲ್ಲಿ ಪಿಯುಸಿ ಶಿಕ್ಷಣ, ಮೈಸೂರಿನ ವಿದ್ಯಾ ವಿಕಾಸ ಕಾಲೇಜಿನಲ್ಲಿ ಬಿಬಿಎ ಎಲ್‍ಎಲ್‍ಬಿ ಪದವಿ ಮುಗಿಸಿದರು. 2023ರಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ಹಿರಿಯ ವಕೀಲ ಐ.ಆರ್.ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ಸೈಯದಾ ಕಾಶ್ಮೀರ ಸಿಮ್ರಾನ್, "ನನ್ನ ತಂದೆ, ತಾಯಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಾತ್ರವಲ್ಲ, ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಪ್ರತಿಪಾದಿಸುತ್ತಿದ್ದರು. ಇದೀಗ ಅವರು ಕನಸನ್ನು ನನಸು ಮಾಡಿದ ತೃಪ್ತಿ ತನಗಿದೆ" ಎಂದು ಹೇಳಿದರು.
ಇವರೊಂದಿಗೆ ಐ.ಆರ್.ಪ್ರಮೋದ್ ಅವರ ಮಾರ್ಗದರ್ಶನವೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾಯಿತು ಎಂದು ಅವರು ನೆನಪಿಸಿಕೊಂಡರು.
10 ಸಾವಿರಕ್ಕೂ ಅಧಿಕ ಮಂದಿ ಸಿವಿಲ್ ನ್ಯಾಯಾಧೀಶರ ಹುದ್ದೆಯ ಪರೀಕ್ಷೆ ಬರೆದಿದ್ದು, ಆ ಪೈಕಿ 83 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಸೈಯದಾ ಕಾಶ್ಮೀರ ಸಿಮ್ರಾನ್ ಅವರು 30 ನೇ ರ‍್ಯಾಂಕ್ ಗಳಿಸಿರುವುದು ವಿಶೇಷ.