ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ; ಮಡಿಕೇರಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ
ಮಡಿಕೇರಿ : ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿದೆ ಎಂದು ಆರೋಪಿಸಿ ಎಸ್‌ಡಿಪಿಐ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು, ಫಾರಂ ನಂ-7ರ ಮೂಲಕ ಅಲ್ಪಸಂಖ್ಯಾತರ ಹೆಸರನ್ನು ಮತಪಟ್ಟಿಯಿಂದ ತೆಗೆಯುವ ಹುನ್ನಾರ ನಡೆದಿದ್ದು, ಪ್ರಕರಣವನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡದ ಮೂಲಕ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ಮಾತನಾಡಿ, ಎಸ್‌ಐಆರ್ ಎನ್ನುವುದು ಕಾನೂನು ಬಾಹಿರ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಹಿಂದೆಯೇ ಎಸ್‌ಡಿಪಿಐ ಹಲವಾರು ಆಕ್ಷೇಪಗಳನ್ನು ಸಲ್ಲಿಸಿದೆ. ಅಲ್ಲದೆ ಒಟ್ಟು ಪ್ರಕ್ರಿಯೆಯನ್ನು ಕೈಬಿಡುವಂತೆ ಜಾನಾಗ್ರಹ ಸಮಾವೇಶ ನಡೆಸಿ ಒತ್ತಾಯಿಸಿದೆ. ಆದರೆ ಎಸ್‌ಐಆರ್ ಗೊಂದಲ ಮುಂದುವರಿದಿದ್ದು, ಮತದಾರರ ಹಕ್ಕಿಗೆ ಚ್ಯುತಿ ಬರುತ್ತಿದೆ ಎಂದರು.
ಪ್ರಸಕ್ತ ನಮ್ಮ ಆಕ್ಷೇಪಗಳಿಗೆ ಪೂರಕವಾಗಿ ಬ್ಯಾಡಗೊಟ್ಟದ ಮತಗಟ್ಟೆ ಸಂಖ್ಯೆ 21ಕ್ಕೆ ಸಂಬಂಧಿಸಿದಂತೆ 63 ಫಾರಂ ನಂ-7 ಸಲ್ಲಿಕೆಯಾಗಿದ್ದು, ಈ ಫಾರಂಗಳನ್ನು ಬಿಜೆಪಿ ಪಕ್ಷದ ಬಿಎಲ್‌ಎಗಳು ಸಲ್ಲಿಸಿದ್ದಾರೆ. ಆಶ್ಚರ್ಯವೆಂದರೆ, ಈ ಫಾರಂಗಳು ಆ ಪಕ್ಷದ ಕಚೇರಿಯಿಂದ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇವಲ ಒಂದು ಮತಗಟ್ಟೆಯಲ್ಲಿ ಈ ಪ್ರಮಾಣದಲ್ಲಿ ಫಾರಂ ನಂ-7 ಸಲ್ಲಿಸುವ ಮೂಲಕ ಮತಪಟ್ಟಿಯಿಂದ ಹೆಸರು ತೆಗೆಯುವ ಹುನ್ನಾರ ನಡೆದಿದೆಯಾದರೆ ಕ್ಷೇತ್ರವಾರು ಇರುವ ಸರಿ ಸುಮಾರು 200 ಮತಗಟ್ಟೆಗಳನ್ನು ಪರಿಗಣಿಸಿದಲ್ಲಿ ಸಾವಿರಾರು ಮತದಾರರ ಹೆಸರನ್ನು ಮತ ಪಟ್ಟಿಯಿಂದ ತೆಗೆಯುವ ಹುನ್ನಾರ ನಡೆದಿರಬಹುದೆಂದು ಆರೋಪಿಸಿದರು.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ವಿಶೇಷ ತನಿಖಾ ಸಮಿತಿಯನ್ನು ರಚಿಸಿ ಜಿಲ್ಲೆಯ ಪ್ರತಿಯೊಂದು ಬೂತ್‌ಗಳಲ್ಲಿ ಪರಿಶೀಲನೆ ನಡೆಸುವ ಮೂಲಕ ಸತ್ಯಾಂಶವನ್ನು ಜನರ ಮುಂದಿಡಬೇಕು. ಇದರೊಂದಿಗೆ ಇದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಅಮೀನ್ ಮೊಹ್ಸಿನ್ ಒತ್ತಾಯಿಸಿದರು.
ಎಸ್‌ಡಿಪಿಐ ಉಪಾಧ್ಯಕ್ಷ ಹಾಗೂ ಮಡಿಕೇರಿ ನಗರಸಭಾ ಸದಸ್ಯ ಎಂ.ಕೆ.ಮನ್ಸೂರ್ ಆಲಿ ಮಾತನಾಡಿದರು.
ಪ್ರತಿಭಟನೆಯ ಬಳಿಕ ಪಕ್ಷದ ಪ್ರಮುಖರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಬ್ಯಾಡಗೊಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಪ್ರಕಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಪ್ರಕರಣವು ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿದೆಯೇ ಅಥವಾ ರಾಜ್ಯದ ಇತರ ಭಾಗಗಳಲ್ಲಿಯೂ ಇಂತಹ ಅಕ್ರಮಗಳು ನಡೆದಿವೆಯೇ ಎಂಬುವುದನ್ನು ಪತ್ತೆಹಚ್ಚಲು ರಾಜ್ಯ ಮಟ್ಟದ ಎಸ್‌ಐಟಿ ರಚಿಸಿ ನಿಷ್ಪಕ್ಷ ತನಿಖೆ ನಡೆಸಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ನಗರಸಭಾ ಸದಸ್ಯರಾದ ಬಶೀರ್, ಮೇರಿ ವೆಗಸ್, ಸಾಮಾಜಿಕ ಹೋರಾಟಗಾರರಾದ ಕೆ.ಮೊಣ್ಣಪ್ಪ, ಡಿ.ಎಸ್.ನಿರ್ವಾಣಪ್ಪ ಸೇರಿ ಹಲವರು ಪಾಲ್ಗೊಂಡಿದ್ದರು.