ವೇಮಗಲ್‍ನಲ್ಲಿ ಕ್ರೋನ್ಸ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಸಚಿವ ಎಂ.ಬಿ.ಪಾಟೀಲ್

Update: 2026-08-20 00:12 IST

ಬೆಂಗಳೂರು: ಪಾನೀಯ, ದ್ರವ ಅಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯು ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ದಾಖಲೆ ಅವಧಿಯಲ್ಲಿ ನಿರ್ಮಿಸಿರುವ ನೂತನ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಸ್ಥಾವರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಬುಧವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2024ರ ಅಕ್ಟೋಬರ್ ತಿಂಗಳಲ್ಲಿ ಕ್ರೋನ್ಸ್ ಕಂಪನಿ ಸಲ್ಲಿಸಿದ್ದ ಹೂಡಿಕೆ ಯೋಜನೆಗೆ ಅನುಮೋದನೆ ಕೊಟ್ಟು, 30 ಎಕರೆ ಭೂಮಿಯನ್ನು ಮಂಜೂರು ಮಾಡಿದೆವು ಎಂದು ಹೇಳಿದರು.

ಬಳಿಕ 2025ರ ಫೆ.20ರಂದು ಈ ಸ್ಥಾವರ ನಿರ್ಮಾಣಕ್ಕೆ ನಾನೇ ಭೂಮಿಪೂಜೆ ಮಾಡಿದೆ. ಇದಾದ ಕೇವಲ 18 ತಿಂಗಳಲ್ಲಿ ಈ ಭವ್ಯ ಸ್ಥಾವರ ತಲೆ ಎತ್ತಿದೆ. ಇದೊಂದು ವಿಶಿಷ್ಟ ದಾಖಲೆಯಾಗಿದ್ದು, ಹೂಡಿಕೆದಾರರಿಗೆ ಒಳ್ಳೆಯ ಸಂದೇಶ ರವಾನಿಸುತ್ತಿದೆ ಎಂದು ಎಂ.ಬಿ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರೋನ್ಸ್ ಕಂಪನಿಯು ಈ ನಿವೇಶನದಲ್ಲಿ ಈಗ 16 ಸಾವಿರ ಚದರ ಮೀಟರ್ ನಷ್ಟು ವಿಸ್ತಾರದ ಉತ್ಪಾದನಾ ಘಟಕ ನಿರ್ಮಿಸಿದೆ. ಇದಕ್ಕಾಗಿ ಕಂಪನಿಯು 315 ಕೋಟಿ ರೂಪಾಯಿ ವಿನಿಯೋಗಿಸಿದ್ದು, ಇಲ್ಲಿ 400 ಉದ್ಯೋಗಗಳು ಸೃಷ್ಟಿಯಾಗಲಿವೆ. ಬೆಂಗಳೂರಿಗೆ ಹತ್ತಿರದಲ್ಲೆ ಇರುವ ವೇಮಗಲ್ ಮತ್ತು ಕೋಲಾರ ಕೈಗಾರಿಕಾ ಪ್ರದೇಶಗಳ ಅಗಾಧ ಬೆಳವಣಿಗೆಗೆ ಅಪಾರ ಅವಕಾಶಗಳಿವೆ. ಕಂಪನಿಗಳು ಸ್ಥಳೀಯ ಯುವಜನರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಕೊಡಲು ಮುಂದಾಗಬೇಕು ಎಂದು ಅವರು ಹೇಳಿದರು.

ಕ್ರೋನ್ಸ್ ಕಂಪನಿಯು ವಿಶ್ವಾದ್ಯಂತ 21 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಕಳೆದ ವರ್ಷ 5.65 ಬಿಲಿಯನ್ ಡಾಲರ್ ವಹಿವಾಟು ನಡೆಸಿರುವ ಕಂಪನಿಯು ರಾಜ್ಯದ ಆರ್ಥಿಕತೆಗೂ ಮೌಲಿಕ ಕೊಡುಗೆ ನೀಡಲಿದೆ. ಈ ಘಟಕದಲ್ಲಿ ಭಾರತದ ಮಾರುಕಟ್ಟೆಗೆ ಉನ್ನತ ಗುಣಮಟ್ಟದ ಎರ್ಗೋಬ್ಲಾಕ್ ಪ್ಯಾಕೇಜಿಂಗ್ ಯಂತ್ರಗಳನ್ನು ಉತ್ಪಾದಿಸಲಿದೆ. ಎಲ್ಲ ರೀತಿಯ ಬಾಟಲಿ ಉತ್ಪಾದನೆಗೆ ಬೇಕಾಗುವ ಯಂತ್ರಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಗಂಟೆಗೆ ಒಂದು ಲಕ್ಷ ಕೊಕೊ ಕೋಲಾ ರೀತಿಯ ಬಾಟಲಿ ತಯಾರಿಸುವ ಯಂತ್ರಗಳನ್ನು ಕೂಡ ಉತ್ಪಾದಿಸುತ್ತಿರುವುದು ಖುಷಿಯ ವಿಚಾರ. ಸರಕಾರದ ಅಂಗವಾದ ಕೆಐಎಡಿಬಿ ಕೈಗಾರಿಕಾಸ್ನೇಹಿ ಸಂಸ್ಕೃತಿಗೆ ಇನ್ನೊಂದು ಹೆಸರಾಗಿದೆ ಎಂದು ಎಂ.ಬಿ.ಪಾಟೀಲ್ ನುಡಿದರು.

ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕ ಕೊತ್ತನೂರು ಮಂಜುನಾಥ್, ವಿಧಾನಪರಿಷತ್ ಮಾಜಿ ಸದಸ್ಯ ವಿ.ಆರ್.ಸುದರ್ಶನ್, ನಿಯೋಜಿತ ಜರ್ಮನ್ ಕಾನ್ಸುಲ್ ಜನರಲ್ ಡಾ.ಕ್ರಿಸ್ಟಾಫ್ ಡೋರ್ಸ್ ಫೆಲ್ಟ್, ಕಂಪನಿಯ ಸಿಓಓ ರಾಲ್ಫ್ ಗೋಲ್ಡ್ ಬ್ರನ್ನರ್, ವ್ಯವಸ್ಥಾಪಕ ನಿರ್ದೇಶಕ ಥಾಮಸ್ ವೂಲ್ಫರ್, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಸುರಾಜ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News