Kolar | ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಶಿಕ್ಷೆ
ಕೋಲಾರ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಕೋಲಾರದ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ, ನೊಂದ ಬಾಲಕಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದ ನಿವಾಸಿ ಮುನಿವೆಂಕಟಪ್ಪ (65) ಶಿಕ್ಷೆಗೊಳಗಾದ ಆರೋಪಿ. ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ ಆರೋಪದ ಸಂಬಂಧ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಠಾಣೆಯ ಪೊಲೀಸ್ ನಿರೀಕ್ಷಕರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಸಾದ್ ಕೆ.ಬಿ. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುನಿವೆಂಕಟಪ್ಪನಿಗೆ ಪೋಕ್ಸೊ ಕಾಯ್ದೆಯಡಿ 20 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದರು. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದರು. ನೊಂದ ಬಾಲಕಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡುವಂತೆಯೂ ಸೂಚಿಸಿದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಡಿ. ಲಲಿತಕುಮಾರಿ ವಾದ ಮಂಡಿಸಿದ್ದರು.