ಲಕ್ಷ್ಮಿನಾರಾಯಣ (78)

ಕೋಲಾರ (ಬಂಗಾರಪೇಟೆ) : ಮದ್ಯಪಾನಕ್ಕಾಗಿ ಹಣ ನೀಡುವ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, 78 ವರ್ಷದ ವೃದ್ಧ ತಂದೆಯೊಬ್ಬರು ತನ್ನ ಹೆತ್ತ ಮಗನನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಬೂದಿಕೋಟೆ ಗ್ರಾಮದ ನಿವಾಸಿ ರಾಜೇಶ್ (28) ಕೊಲೆಯಾದ ಯುವಕ. ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ ಲಕ್ಷ್ಮಿನಾರಾಯಣ (78) ಅವರನ್ನು ಬೂದಿಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ಹಿನ್ನೆಲೆ:

ಈ ಹಿಂದೆ ಆಟೋ ಚಾಲಕನಾಗಿ ದುಡಿಯುತ್ತಿದ್ದ ರಾಜೇಶ್, ಕಳೆದ ಒಂದು ವರ್ಷದಿಂದ ಯಾವುದೇ ಕೆಲಸಕ್ಕೆ ಹೋಗದೆ ತೀವ್ರ ಮದ್ಯವ್ಯಸನಿಯಾಗಿದ್ದ. ಕುಡಿಯಲು ಹಣ ಹೊಂದಿಸಲು ಮನೆಯಲ್ಲಿದ್ದ ಅಕ್ಕಿ, ದವಸ–ಧಾನ್ಯಗಳು ಹಾಗೂ ಪಾತ್ರೆ ಸಾಮಾನುಗಳನ್ನೂ ಮಾರಾಟ ಮಾಡುತ್ತಿದ್ದ. ಅಲ್ಲದೆ, ನಿತ್ಯ ಕುಡಿದ ಮತ್ತಿನಲ್ಲಿ ಮನೆಗೆ ಬಂದು ತಂದೆಯೊಂದಿಗೆ ಜಗಳ ತೆಗೆದು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ:

ಶನಿವಾರ (ನ. 28) ಬೆಳಿಗ್ಗೆ 10.45ರ ಸುಮಾರಿಗೆ ರಾಜೇಶ್ ಮತ್ತೆ ಮದ್ಯಕ್ಕೆ ಹಣ ನೀಡುವಂತೆ ತಂದೆ ಲಕ್ಷ್ಮಿನಾರಾಯಣ ಅವರನ್ನು ಒತ್ತಾಯಿಸಿದ್ದಾನೆ. ತಮ್ಮ ಬಳಿ ಹಣವಿಲ್ಲ ಎಂದು ತಂದೆ ತಿಳಿಸಿದಾಗ, ಮನೆಯಲ್ಲಿದ್ದ ಹಳೆಯ ಟಿವಿಎಸ್ ದ್ವಿಚಕ್ರ ವಾಹನವನ್ನು ಮಾರಾಟ ಮಾಡುವುದಾಗಿ ರಾಜೇಶ್ ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ.

ಈ ವಿಚಾರವಾಗಿ ತಂದೆ-ಮಗನ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಆಕ್ರೋಶಗೊಂಡ ರಾಜೇಶ್ ಮನೆಯಲ್ಲಿದ್ದ ಮಚ್ಚು ತೆಗೆದುಕೊಂಡು ತಂದೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಈ ಹಂತದಲ್ಲಿ ತೀವ್ರ ಉದ್ರಿಕ್ತರಾದ ತಂದೆ ಲಕ್ಷ್ಮಿನಾರಾಯಣ, ಮನೆಯಲ್ಲಿದ್ದ ಚಾಕುವಿನಿಂದ ರಾಜೇಶ್ ಅವರ ಎದೆಯ ಎಡಭಾಗಕ್ಕೆ ಬಲವಾಗಿ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ರಾಜೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬೂದಿಕೋಟೆ ಪಿಎಸ್‌ಐ ಗುರುರಾಜ ಚಿಂತಾಕಲ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ವಿ.ನಾಗರಾಜ್, ಕೋಲಾರ

contributor

‌ನಾಗರಾಜ ಸಿ.ವಿ. ಅವರು ಮೂಲತಃ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಜನಪರ ಚಳವಳಿಗಳಲ್ಲಿ ಮೂರು ದಶಕಗಳಿಂದ ಗುರುತಿಸಿಕೊಂಡಿರುವ ಇವರು, ಆತ್ಮಕತೆಗಳು ಓದುವುದು ಹವ್ಯಾಸವಾಗಿಸಿಕೊಂಡಿದ್ದಾರೆ. ಪ್ರಸ್ತುತ ಕಳೆದ ಇಪ್ಪತ್ತು ವರ್ಷಗಳಿಂದ ವಾರ್ತಾಭಾರತಿ ದಿನ ಪತ್ರಿಕೆಯಲ್ಲಿ ಕೋಲಾರ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.